ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಆಲಮಟ್ಟಿ ಹಿನ್ನೀರಿನ (ಕೊಲ್ಹಾರದಿಂದ ವಿಜಯಪುರ ನಗರಕ್ಕೆ) ಪಿಎಸ್‌ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ ಕಾಮಗಾರಿಯ ಮರು ಟೆಂಡರ್ ಕರೆಯಲು ಕಾರ್ಯಪಾಲಕ ಅಭಿಯಂತರೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆಗೆ ₹ ೫೨ ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಸೆಲ್ವಮಣಿ ಆರ್. ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಜಯಪುರ ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಆಲಮಟ್ಟಿ ಹಿನ್ನೀರಿನ ಪಿ.ಎಸ್.ಸಿ. ಕೊಳವೆ ಮಾರ್ಗ ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ ಕಾಮಗಾರಿಯ ಮರು ಟೆಂಡರ್ ಆಹ್ವಾನ ಸೇರಿದಂತೆ ವಿವಿಧ ಮಹತ್ವದ ವಿಷಯಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲಕುಮಾರ ಘೋಷ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಇತರೆ ಪಟ್ಟಣಗಳಲ್ಲಿ ಕೇಂದ್ರ ಪುರಸ್ಕೃತ ಅಮೃತ-೨.೦ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿ, ಬಹುತೇಕ ಪಟ್ಟಣಗಳಲ್ಲಿ ಕಾಮಗಾರಿಯ ಕರಾರು ಪತ್ರಗಳನ್ನು ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕೆಲವು ಪಟ್ಟಣಗಳಲ್ಲಿ ನೀರು ಸರಬರಾಜು ಯೋಜನೆಗಳ ಆಡಳಿತಾತ್ಮಕ ಅನುಮೋದನೆಗೆ ಬಾಕಿ ಇರುವ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲಕುಮಾರ ಘೋಷ್ ಮಾತನಾಡಿ, ಕೇಂದ್ರ ಪುರಸ್ಕೃತ ಅಮೃತ್-೧.೦ ಯೋಜನೆಯಡಿಯ ಕಾಮಗಾರಿಗಳನ್ನು ೨೦೨೪ರ ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಜಯಪುರ ನಗರದಲ್ಲಿ ಕೇಂದ್ರ ಪುರಸ್ಕೃತ ಅಮೃತ್- ೧.೦ ಯೋಜನೆಯನ್ನು ಪೂರ್ಣಗೊಳಿಸಲು ವಿವಿಧ ಹಂತಗಳಲ್ಲಿ ಹಲವು ಬಾರಿ ಜಲಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ಪ್ರಸ್ತುತ ವಲಯವಾರು ಪ್ರಗತಿ ಅವಲೋಕಿಸಿ, ಎಲ್ಲ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು. ಒಂದು ವೇಳೆ ಗುತ್ತಿಗೆದಾರರು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಟೆಂಡರ್ ನಿಯಮಾವಳಿಗಳಂತೆ, ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ತಿಕೋಟಾ ಪಟ್ಟಣಗಳಿಗೆ ಸಗಟು ನೀರು ಸರಬರಾಜು ಹಾಗೂ ಕೇಂದ್ರ ಪುರಸ್ಕೃತ ಅಮೃತ್-೨.೦ ಯೋಜನೆಯಲ್ಲಿ ನೀರು ಸರಬರಾಜು ಯೋಜನೆಗಳ ಕುರಿತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದರು. ಎರಡೂ ಪಟ್ಟಣಗಳಿಗೆ ಸಗಟು ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರದ ಅನುದಾನದಲ್ಲಿ ಹಾಗೂ ವಿತರಣಾ ನೀರು ಸರಬರಾಜು ವ್ಯವಸ್ಥೆ ಮಾಡಲು ಕೇಂದ್ರ ಪುರಸ್ಕೃತ ಅಮೃತ್-೨.೦ ಅನುದಾನದಲ್ಲಿ ಯೋಜನೆಗಳ ರೂಪುರೇಷೆಗಳನ್ನು ತಯಾರಿಸಿ, ಆಡಳಿತಾತ್ಮಕ ಅನುಮೋದನೆ ಪಡೆದು, ಟೆಂಡರ್ ಕರೆಯಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್
ಭೂತನಾಳ ಕೆರೆ 2 ಭಾರಿ ಭರ್ತಿ ಅವಶ್ಯವಿಜಯಪುರ ನಗರದ ೪, ೫, ೬, ೧೦ ಮತ್ತು ೧೨ ವಾರ್ಡ್‌ಗಳು ಭೂತನಾಳ ಕೆರೆಯ ಮೇಲೆಯೇ ಅವಲಂಬಿತವಾಗಿದ್ದು, ಇವುಗಳಿಗೆ ವರ್ಷ ಪೂರ್ತಿ ಕುಡಿಯುವ ನೀರು ಸರಬರಾಜು ಮಾಡಲು ಭೂತನಾಳ ಕೆರೆಯನ್ನು ಪ್ರತಿ ವರ್ಷ ೨ ಬಾರಿ ಸಂರ್ಪೂಣ ಭರ್ತಿ ಮಾಡುವುದು ಅವಶ್ಯ. ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ನಿಬಂಧಿತ ಅನುದಾನದಲ್ಲಿ ಅಂದಾಜು ಮೊತ್ತ ₹ ೩.೨೭ ಕೋಟಿ ಮೀಸಲಿರಿಸಲಾದೆ. ಕಾಮಗಾರಿ ಶೀಘ್ರದಲ್ಲಿ ಕೈಗೊಂಡರೆ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಬಹುದು. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರು ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅನುಮತಿ ಹಾಗೂ ಅನುಮತಿ ಪಡೆಯಲು ಕ್ರಮ ವಹಿಸುವಂತೆ ಸೂಚಿಸಿದರು.