ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡಗಲಪುರ ನಾಗೇಂದ್ರ ಬಣದ ಕರ್ನಾಟಕ ರಾಜ್ಯ ರೈತ ಸಂಘದ ಚಿನ್ಹೆ ಇರುವ ಹಸಿರು ಶಾಲನ್ನು ಚಿಕ್ಕಮಗಳೂರು ಜಿಲ್ಲೆ ಮತ್ತು ತಾಲೂಕಿನ ರೈತ ಸಂಘದ ಮುಖಂಡರು ತಿರಸ್ಕರಿಸಿದ್ದಾರೆ.

ಜತೆಗೆ, ರೈತ ಸಂಘದ ಸಂಕೇತವಾಗಿರುವ ಸಾದಾ ಹಸಿರು ಶಾಲನ್ನು ಮಾತ್ರ ಬಳಸುತ್ತೇವೆ ಮತ್ತು ರೈತ ಪರ ಚಳವಳಿ ಯಿರುವ ಪ್ರತ್ಯೇಕ ಬಣದಲ್ಲಿ ಗುರುತಿಸಿಕೊಳ್ಳಲಿದ್ದೇವೆ ಎಂದು ರೈತ ಮುಖಂಡರು ಘೋಷಿಸಿದರು.

ಶುಕ್ರವಾರ ಪ್ರೆಸ್‌ ಕ್ಲಬ್‌ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಬಣದಿಂದ ಉಚ್ಛಾಟಿತ ರೈತ ಮುಖಂಡ ವೈ.ಸಿ.ಸುನೀಲ್‌ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗ ಲಪುರ ನಾಗೇಂದ್ರ ಅವರು ರೈತ ಸಂಘದಲ್ಲಿ ಸಕ್ರಿಯರಾಗಿದ್ದ ಮೂವರನ್ನು ಉಚ್ಛಾಟಿಸಿದ್ದಾರೆ. ಹೀಗಾಗಿ, ಇಂದಿನಿಂದಲೇ ಅವರ ಬಣದಲ್ಲಿ ಕಡ್ಡಾಯಗೊಳಿಸಿರುವ ಚಿನ್ಹೆ ಇರುವ ಶಾಲನ್ನು ತಿರಸ್ಕಸಿದ್ದೇವೆ ಎಂದರು.

ರೈತಸಂಘದ ರಾಜ್ಯಾಧ್ಯಕ್ಷರು ನಮಗೆ ಸದಸ್ಯತ್ವ ನೀಡಿ ನಮ್ಮ ಕೋರಿಕೆ ಇಲ್ಲದಿದ್ದರೂ ಪದಾಧಿಕಾರಿ ಹುದ್ದೆ ನೀಡಿ ಚೆನ್ನಾಗಿ ದುಡಿಸಿಕೊಂಡು ಈಗ ನಾವೂ (ವೈ.ಸಿ.ಸುನೀಲ್‌ಕುಮಾರ್ನಾ), ಪರ್ವತೇಗೌಡ ಮತ್ತು ರಾಮೇಗೌಡ ಅವರನ್ನು ಉಚ್ಛಾಟಿಸಿದ್ದಾರೆ. ಹೋರಾಟಗಾರರನ್ನು ಉಚ್ಛಾಟನೆ ಮೂಲಕ ಕುಗ್ಗಿಸಲಾಗದು. ಕರ್ನಾಟಕ ರಾಜ್ಯ ರೈತಸಂಘ ಯಾರೊಬ್ಬರ ಸ್ವತ್ತಲ್ಲ ಎಂದು ಹೇಳಿದರು.


ಆಗಿರುವ ಅನ್ಯಾಯದ ಬಗ್ಗೆ ಸರ್ವ ಸದಸ್ಯರಲ್ಲಿ ಚರ್ಚಿಸಲಾಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ರೈತ ಪರ ಚಳವಳಿ ಮಾಡುವ ಅನೇಕ ಬಣಗಳಿವೆ. ರಾಜ್ಯಾಧ್ಯಕ್ಷರಿದ್ದಾರೆ. ಅಂತಹ ಬಣಕ್ಕೆ ಬೆಂಬಲಿಸುತ್ತೇವೆ. ನೀತಿ ಇಲ್ಲದ ನಾಗೇಂದ್ರ ಬಣದಿಂದ ಹೊರಬರುತ್ತಿದ್ದೇವೆ. ಪ್ರತ್ಯೇಕ ಸಂಘಟಿತರಾಗಿ ರೈತರ ಹಿತ ಕಾಪಾಡುತ್ತೇವೆ. ಈ ಬಗ್ಗೆ ಸದ್ಯದಲ್ಲೇ ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ನೇತೃತ್ವದಲ್ಲಿ ಜಿಲ್ಲಾಸಮಿತಿ ಮತ್ತು ತಾಲೂಕು ಸಮಿತಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ವರಿಷ್ಠ ಕೆ.ಕೆ.ಕೃಷ್ಣೇಗೌಡ, ತಾಲೂಕು ಉಪಾಧ್ಯಕ್ಷರಾದ ಕಾಂತರಾಜು, ಚಂದ್ರಶೇಖರ್‌, ಹುಲಿಯಪ್ಪಗೌಡ, ಮುಖಂಡರಾದ ಪರ್ವತೇಗೌಡ, ಆನಂದ್‌, ಲೋಕೇಶ್‌, ಶಂಕರ್‌ ಡಿ.ರಾಮೇಗೌಡ ಮತ್ತಿತರಿದ್ದರು.ಫೋಟೋ

ಕರ್ನಾಟಕ ರಾಜ್ಯ ರೈತ ಸಂಘ ಬಡಗಲಪುರ ನಾಗೇಂದ್ರ ಬಣದ ಚಿನ್ಹೆ ಇರುವ ಹಸಿರು ಶಾಲನ್ನು ಚಿಕ್ಕಮಗಳೂರು ರೈತ ಮುಖಂಡರು ಶುಕ್ರವಾರ ತೇಜಿಸಿದರು. ರೈತ ಸಂಘದ ರಾಜ್ಯ ವರಿಷ್ಠ ಕೆ.ಕೆ.ಕೃಷ್ಣೇಗೌಡ, ತಾಲೂಕು ಉಪಾಧ್ಯಕ್ಷರಾದ ಕಾಂತರಾಜು, ಚಂದ್ರಶೇಖರ್‌, ಹುಲಿಯಪ್ಪಗೌಡ, ಮುಖಂಡರಾದ ಪರ್ವತೇಗೌಡ, ಆನಂದ್‌, ಲೋಕೇಶ್‌, ಶಂಕರ್‌ ಡಿ.ರಾಮೇಗೌಡ, ವೈ.ಸಿ.ಸುನೀಲ್‌ಕುಮಾರ್ ಇದ್ದರು.