ರಾಜ್ಯ ಸರ್ಕಾರವು ಸುಗಮ ಸಂಗೀತ ಅಕಾಡೆಮಿ ಸ್ಥಾಪಿಸುವ ಸಂಬಂಧ ಚರ್ಚಿಸಿ ತೀರ್ಮಾನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭರವಸೆ ನೀಡಿದರು.

ಮೈಸೂರು : ರಾಜ್ಯ ಸರ್ಕಾರವು ಸುಗಮ ಸಂಗೀತ ಅಕಾಡೆಮಿ ಸ್ಥಾಪಿಸುವ ಸಂಬಂಧ ಚರ್ಚಿಸಿ ತೀರ್ಮಾನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭರವಸೆ ನೀಡಿದರು.

ನಗರದ ಕಲಾಮಂದಿರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಗೀತೋತ್ಸವ- 2025, 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನ್ನ ಅನುಪಸ್ಥಿತಿಯಲ್ಲಿ ನ್ಯಾ. ಗೋಪಾಲಗೌಡರು ಉದ್ಘಾಟಿಸಿರುವುದು ಸಂತೋಷವನ್ನುಂಟು ಮಾಡಿದೆ. ಪ್ರಗತಿಪರ ಆಲೋಚನೆಯುಳ್ಳ, ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಗೋಪಾಲಗೌಡರಿಂದ ಉದ್ಘಾಟನೆಗೊಂಡಿರುವುದು ಸಂತೋಷದ ಸಂಗತಿ. ಸಂಗೀತ ಮತ್ತು ಸಾಹಿತ್ಯದ ಮಿಲನ‌ ಜನರ ಜೀವನವನ್ನು ಉಲ್ಲಾಸಿತಗೊಳಿಸುತ್ತದೆ. ಈ ಸಮ್ಮೇಳನದಲ್ಲಿ ಅತಿರಥ ಮಹಾರಥರು ವಿವಿಧೆಡೆಯಿಂದ ಆಗಮಿಸಿದ್ದಾರೆ. ಸಂಗೀತಕ್ಕೆ ಮೈಸೂರು ಅರಸರಿಂದ ಹೆಚ್ಚು ಬೆಂಬಲ ದೊರಕಿತು. ಈಗಾಗಲೇ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಇದೆ. ಇದನ್ನು ಪ್ರತ್ಯೇಕಿಸಬೇಕೆ ಅಥವಾ ಹಾಗೆಯೇ ಉಳಿಸಬೇಕೆ ಎಂಬುದನ್ನು ಕೂಲಂಕುಷವಾಗಿ ಚರ್ಚಿಸಿ ತೀರ್ಮಾನಿಸುವುದಾಗಿ ಅವರು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಮಾತನಾಡಿ, ಸುಗಮ ಸಂಗೀತಕ್ಕೆ ಹೆಸರುವಾಸಿ ಆಗಿರುವುದು ಕರ್ನಾಟಕ ಮಾತ್ರ. ಸುಗಮ ಸಂಗೀತವು ಹೃದಯಸ್ಪರ್ಶಿ ಸಾಹಿತ್ಯ ಸಂಗಮವಾಗಿದೆ. ಪದ್ಯದ ಅರ್ಥವನ್ನು ಸ್ಪಷ್ಟವಾಗಿ ಮುಂದುವರಿಸುವುದರ ಜತೆಗೆ ಭಾವನಾತ್ಮಕ ಅನುಭವ ನೀಡುತ್ತದೆ. ಕನ್ನಡ ನುಡಿಯ ಸೊಗಸನ್ನು ತಿಳಿಸುತ್ತದೆ. ಡಿಜಿಟಲ್ ಯುಗದಲ್ಲೂ ಹೊಸ ಹೊಸ ರೂಪದಲ್ಲಿ ಸುಗಮ ಸಂಗೀತ ಮೂಡಿಬರುತ್ತಿದೆ ಎಂದರು.

ಆಡಂಬರ ಕಡಿಮೆ ಇದ್ದು, ಸಾಹಿತ್ಯದ ಸ್ಪಷ್ಟ ಉಚ್ಚಾರಣೆ ಸುಗಮ ಸಂಗೀತದಲ್ಲಿದೆ. ಇಲ್ಲಿ ಭಾವಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ. ಜೀವನದ ನಾಡಿ ಹಿಡಿಯುವ ಸಮ್ಮೇಳನ ಇದಾಗಿದೆ. ಜನರಿಗೆ ಖುಷಿ ನೀಡುವಂತಹ ಸಾಂಸ್ಕೃತಿಕ ಸಮ್ಮೇಳನವನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಗಮಸಂಗೀತ ಕ್ಷೇತ್ರದವರು ಈ ದೇಶದ ಅತ್ಯಂತ ದೊಡ್ಡ ಸಂಪತ್ತು. ಸಂಗೀತದಿಂದ ಬದುಕು ಹಸನಾಗುತ್ತದೆ. ಜನರ ಆಯಸ್ಸು ಹೆಚ್ಚುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಸುಗಮ ಸಂಗೀತ ಸಮ್ಮೇಳನಕ್ಕೆ ಧನ ಸಹಾಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಅವರು ಪ್ರಗತಿಪರ ಚಿಂತನೆಯುಳ್ಳವರು. ಕೂಡಲೇ ನನ್ನ ಪತ್ರದ ಮೇಲೆ 25 ಲಕ್ಷ ಬಿಡುಗಡೆಗೊಳಿಸುವುದು ಎಂದು ಬರೆದು ಕಳುಹಿಸಿದರು. ಇಲಾಖೆಯ ಅಧಿಕಾರಿಗಳು ಹಣವನ್ನೂ ಬಿಡುಗಡೆಗೊಳಿಸಿದರು. ಅಂತೆಯೇ ಸುಗಮ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ವಿಶ್ವಾಸವೂ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಈ ಸಮ್ಮೇಳನವು ಗೀತ, ಸಂಗೀತ ಮತ್ತು ಭಾವ ಎಲ್ಲವನ್ನೂ ಕಲೆ ಹಾಕಿದೆ. ಈ ಸಮ್ಮೇಳನವು ಮನೆ ಮನೆಗೆ, ಮನ ಮನಕ್ಕೆ ತಲುಪಿದೆ ಎಂದು ಶ್ಲಾಘಿಸಿದರು.

2024ರ ಕಾವ್ಯಶ್ರೀ ಪ್ರಶಸ್ತಿ ಸ್ವೀಕರಿಸಿದ ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ಈ ಪ್ರಶಸ್ತಿಯನ್ನು ದಿವಂಗತ ಎಚ್.ಎಸ್. ವೆಂಕಟೇಶ ಮೂರ್ತಿ ಅವರಿಗೆ ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಗೀತ ಅಕಾಡೆಮಿ ಸ್ಥಾಪನೆ ಸಾಧ್ಯವಾಗಲಿ ಎಂದು ಆಶಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ನಗರ ಶ್ರೀನಿವಾಸ ಉಡುಪ, ಶಾಸಕ ಟಿ.ಎಸ್‌. ಶ್ರೀವತ್ಸ, ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಗಾಯಕಕಾದ ಕಿಕ್ಕೇರಿ ಕೃಷ್ಣಮೂರ್ತಿ, ರತ್ನಮಾಲ ಪ್ರಕಾಶ್‌, ನಾ. ದಾಮೋದರ ಶೆಟ್ಟಿ, ಕೆ.ಎಸ್‌. ಸುರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎಂ. ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌, ನಾಗರಾಜ್‌ವಿ. ಬೈರಿ, ಅಂಶಿ ಪ್ರಸನ್ನಕುಮಾರ್‌, ಗಂಗಾಧರಪ್ಪ ಸಿರಿಬಾಲು, ಬೆಟ್ಟೇಗೌಡ, ಮಹದೇವ್‌, ಡಾ.ವೈ.ಡಿ. ರಾಜಣ್ಣ, ರಾಜಶೇಖರ ಕದಂಬ, ನಾರಾಯಣಗೌಡ, ವೀರೇಶ್‌, ಮಡ್ಡಿಕೆರೆ ಗೋಪಾಲ್‌ ಮೊದಲಾದವರು ಇದ್ದರು.