ನೀರಿನ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಲು ಸಮಿತಿ ರಚನೆಗೆ ತೀರ್ಮಾನ: ಅಧ್ಯಕ್ಷ ಕೆ.ಶೇಷಾದ್ರಿ

| Published : Feb 11 2025, 12:47 AM IST

ನೀರಿನ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಲು ಸಮಿತಿ ರಚನೆಗೆ ತೀರ್ಮಾನ: ಅಧ್ಯಕ್ಷ ಕೆ.ಶೇಷಾದ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ತಮಗಿರುವ ಮಾಹಿತಿಯ ಪ್ರಕಾರ ಹೊಸ ವ್ಯವಸ್ಥೆಯಲ್ಲಿ ಶೇ.60 ರಷ್ಟು ನೀರು ಪೋಲಾಗುತ್ತಿದೆ. ಎಂ.ಜಿ.ರಸ್ತೆ, ಮುಖ್ಯರಸ್ತೆಗಳಲ್ಲೇ 10 ಕಡೆ ನೀರು ಪೋಲಾಗುತ್ತಿದೆ. ಸಾರ್ವಜನಿಕರ ದೂರು- ದುಮ್ಮಾನಗಳಿಗೆ ಸ್ಪಂದಿಸಲು ದೂರು ಸ್ವೀಕಾರ ಕೇಂದ್ರ ಹಾಗೂ ಅಗತ್ಯ ಸಿಬ್ಬಂದಿಯೂ ಇಲ್ಲ. ಇದಕ್ಕೆ ಜಲಮಂಡಳಿ ಅಧಿಕಾರಿಗಳು ವಿವರಣೆ ಕೊಡಬೇಕು ಎಂದು ಶೇಷಾದ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರದಲ್ಲಿನ ಮನೆಗಳಿಗೆ ನೆಟ್ಕಲ್ ಯೋಜನೆಯಲ್ಲಿ ಕುಡಿಯುವ ನೀರು ಪೂರೈಸುವುದರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಲು ಸೋಮವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡುಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಜಲ ಮಂಡಳಿ ಅಧಿಕಾರಿಗಳಿಂದ ಸ್ಪಷ್ಟವಾದ ಉತ್ತರ ದೊರಕದಿದ್ದಾಗ ಸಮಿತಿ ರಚನೆ ಮಾಡುವ ನಿರ್ಧಾರಕ್ಕೆ ಬರಲಾಯಿತು.

ನಗರದ 31 ವಾರ್ಡುಗಳಲ್ಲಿಯೂ ದಿನದ 24 ಗಂಟೆ ಕುಡಿಯುವ ನೀರು ಮನೆಗಳಿಗೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಅಲ್ಲಲ್ಲಿ ಪೈಪ್ ಲೈನ್ ಗಳು ಒಡೆದು ಹೋಗಿವೆ. ಮನೆಗಳಿಗೆ ಕೊಳಾಯಿ ಸಂಪರ್ಕ ನೀಡಿಲ್ಲ. ರಸ್ತೆಗಳಲ್ಲಿ ನೀರು ಪೋಲಾಗುತ್ತಿದೆ ಎಂದು ಸದಸ್ಯರು ಹಾಗೂ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ.

ಈ ಸಮಸ್ಯೆಗಳ ಬಗ್ಗೆ ವಾಸ್ತವ ಮಾಹಿತಿ ಸಂಗ್ರಹಿಸಲು ನಗರಸಭಾ ಸದಸ್ಯರನ್ನೊಳಗೊಂಡಂತೆ ಸಮಿತಿ ರಚಿಸಲಾಗುವುದು, ನಗರಸಭೆ ಮತ್ತು ಜಲಮಂಡಳಿ ಅಧಿಕಾರಿಯೊಬ್ಬರು ಈ ಸಮಿತಿಯಲ್ಲಿ ಸದರಿ ಸಮಿತಿ ಸದಸ್ಯರು ಎಲ್ಲಾ ವಾರ್ಡುಗಳಿಗೂ ಭೇಟಿ ನೀಡಿ ಆಯಾಯ ಭಾಗದ ನಗರಸಭಾ ಸದಸ್ಯರ ಸಹಕಾರದಲ್ಲಿ ಪರಿಶೀಲನೆ ನಡೆಸಬೇಕು. ಕಲೆ ಹಾಕಿದ ಮಾಹಿತಿಯನ್ನು ಆಧರಿಸಿ ಮತ್ತೊಂದು ಸಭೆಯನ್ನು ಆಯೋಜಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಎಂದು ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದಾಗ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಸದಸ್ಯೆ ಪಾರ್ವತಮ್ಮ ಮಾತನಾಡಿ, ನಗರದ ಬಹುತೇಕ ಕಡೆ ನೀರು ಸರಬರಾಜು ಆಗುತ್ತಿಲ್ಲ. ಸರಬರಾಜು ಆಗುತ್ತಿರುವ ಕಡೆ ನೀರು ಪೋಲಾಗುತ್ತಿದೆ. ಟೆಂಡರ್ ಪ್ಯಾಕೇಜ್‌ ನಂತೆ ಕಾಮಗಾರಿ ನಡೆದಿಲ್ಲ. ಎಲ್ಲವೂ ಕಳಪೆ ಕಾಮಗಾರಿ ಆಗಿದೆ. ಗುತ್ತಿಗೆದಾರನಿಗೆ ಟೆಂಡರ್ ಮೊತ್ತವನ್ನು ಬಿಡುಗಡೆ ಮಾಡಬೇಡಿ. ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

ದಿನವೊಂದಕ್ಕೆ ಪ್ರತಿ ಮನೆಗೆ ಅಗತ್ಯವಿರುವ ಪ್ರಮಾಣದ ನೀರು ಸರಬರಾಜು ಆಗುತ್ತಿಲ್ಲ. ಹಳೆ ವ್ಯವಸ್ಥೆಯಲ್ಲಿದ್ದ ಕೊರತೆಯೇ ಹೊಸ ವ್ಯವಸ್ಥೆಯಲ್ಲೂ ಮುಂದುವರಿದಿದೆ. ಜನರು ನಗರಸಭಾ ಸದಸ್ಯರ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಸದಸ್ಯ ಅಕ್ಲಿಂ ಪಾಷ ಹೇಳಿದರು.

ಸದಸ್ಯರಾದ ಫೈರೋಜ್ ಪಾಷ, ರಮೇಶ್, ಶಿವಸ್ವಾಮಿ, ಬೈರೇಗೌಡ, ಮಹಾಲಕ್ಷ್ಮೀ, ಮಂಜುಳಾ, ಗಿರಿಯಮ್ಮ, ಮೊಯಿನ್ ಖುರೇಷಿ ಮುಂತಾದವರು, ಬಹಳಷ್ಟು ಮನೆಗಳಿಗೆ ಇನ್ನೂ ಹೊಸ ಸಂಪರ್ಕಗಳನ್ನೇ ನೀಡಿಲ್ಲ. ಎಲ್ಲ ಬಡಾವಣೆಗಳಲ್ಲಿ ನೀರು ಪೋಲಾಗುತ್ತಿದೆ. ಪೈಪ್ ಲೈನ್ ಅಳವಡಿಸಲು ಅಗೆದಿರುವ ಜಾಗದಲ್ಲಿ ಗುಂಡಿ ಬಿದ್ದಿದ್ದು, ವಾಹನಗಳು ಸಂಚರಿಸಲು ಕಷ್ಟವಾಗುತ್ತಿದೆ ಎಂದರು.

ಇದಕ್ಕೆ ಧ್ವನಿ ಗೂಡಿಸಿದ ಸದಸ್ಯ ಅಜ್ಮತ್ , ಬರಗಾಲದಲ್ಲಿ ಸರಬರಾಜು ಆಗುತ್ತಿದ್ದ ಪ್ರಮಾಣದ ನೀರು ಈಗ ಆಗುತ್ತಿಲ್ಲ. ನೀರು ಪೋಲಾಗುತ್ತಿರುವ ಬಗ್ಗೆ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಆಯುಕ್ತ ಜಯಣ್ಣ ಮಾತನಾಡಿ, ಈಗ 40 ರಿಂದ 50 ಲಕ್ಷ ನೀರಿನ ವಿದ್ಯುತ್ ಬಿಲ್ ಪಾವತಿಸಿದ್ದೇವೆ. ಆದರೂ ಮನೆಗಳಿಗೆ ನೀರು ಪೂರೈಕೆಯಾಗದೆ, ರಸ್ತೆಯಲ್ಲಿ ಪೋಲಾಗುತ್ತಿದೆ. ನೀರು ಸೋರಿಕೆ ಆಗುತ್ತಿರುವಾಗ ಬಲವಾಗಿ ನೀರು ತಲುಪಲು ಹೇಗೆ ಸಾಧ್ಯವಾಗುತ್ತದೆ. 456 ಕೋಟಿ ವೆಚ್ಚದ ಯೋಜನೆ ನಿರ್ವಹಣೆ ಮಾಡುವಾಗ ದೂರು ಸ್ವೀಕಾರ ಕೇಂದ್ರ ತೆರೆಯಬೇಕು ಎಂದು ಸಲಹೆ ನೀಡಿದರು.

ಆಗ ಶೇಷಾದ್ರಿಯವರು, ಹೊಸ ವ್ಯವಸ್ಥೆಯಲ್ಲಿ ವಾಲ್ವ್ ಗಳು ಅಳವಡಿಸಿರುವ ಸ್ಥಳದಲ್ಲಿ ಸಿಮೆಂಟ್ ಸ್ಲಾಬ್‌ಗಳನ್ನು ಅಳವಡಿಸಲಾಗಿದೆ. ಆದರೆ, ಭಾರೀ ವಾಹನಗಳು ಓಡಾಡುವ ಸ್ಥಳದಲ್ಲಿ ಈ ಸ್ಲಾಬ್‌ಗಳು ಭಾರ ತಡೆಯುವುದು ಅನುಮಾನ. ಎಂ.ಜಿ.ರಸ್ತೆಯ ಕಾಮಣ್ಣನ ಗುಡಿ ವೃತ್ತದಲ್ಲಿನ ಸ್ಲಾಬ್‌ಗಳ ಉದಾಹರಣೆ ನೀಡಿದ ಅವರು, ಸಧ್ಯದಲ್ಲೇ ಶ್ರೀರಾಮ ದೇವರ ರಥೋತ್ಸವ ನಡೆಯಲಿದೆ. ರಥ 23 ಟನ್ ತೂಕವಿದೆ. ಸ್ಲಾಬ್‌ಗಳಿರುವ ಸ್ಥಳದಲ್ಲಿ ರಥ ಸಾಗಬೇಕು. ಆದರೆ, ರಥದ ಭಾರ ತಡೆಯುವ ಸಾಮರ್ಥ್ಯ ಸ್ಲಾಬ್‌ಗಳಿಗಿದೆಯೇ ಎಂದು ಪ್ರಶ್ನಿಸಿದರು.

ತಮಗಿರುವ ಮಾಹಿತಿಯ ಪ್ರಕಾರ ಹೊಸ ವ್ಯವಸ್ಥೆಯಲ್ಲಿ ಶೇ.60 ರಷ್ಟು ನೀರು ಪೋಲಾಗುತ್ತಿದೆ. ಎಂ.ಜಿ.ರಸ್ತೆ, ಮುಖ್ಯರಸ್ತೆಗಳಲ್ಲೇ 10 ಕಡೆ ನೀರು ಪೋಲಾಗುತ್ತಿದೆ. ಸಾರ್ವಜನಿಕರ ದೂರು- ದುಮ್ಮಾನಗಳಿಗೆ ಸ್ಪಂದಿಸಲು ದೂರು ಸ್ವೀಕಾರ ಕೇಂದ್ರ ಹಾಗೂ ಅಗತ್ಯ ಸಿಬ್ಬಂದಿಯೂ ಇಲ್ಲ. ಇದಕ್ಕೆ ಜಲಮಂಡಳಿ ಅಧಿಕಾರಿಗಳು ವಿವರಣೆ ಕೊಡಬೇಕು ಎಂದು ಶೇಷಾದ್ರಿ ಹೇಳಿದರು.

ಅಧ್ಯಕ್ಷರು ಮತ್ತು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಲ ಮಂಡಳಿ ಇಇ ಪವಿತ್ರ, ಪೈಪು ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನೀರು ಹರಿವಿನ ಬಲವನ್ನು ಪೈಪುಗಳು ತಡೆದುಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಕಡೆ ಪೈಪುಗಳು ಮುಚ್ಚಿ ಹೋಗಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎಂದರು.ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ಭಾನು, ಜಲಮಂಡಳಿ ಎಇಇ ಕುಸುಮಾ ಉಪಸ್ಥಿತರಿದ್ದರು.