ಕಲ್ಲು ಗಣಿಗಾರಿಕೆ: ಇಂದು ಪ್ರತಿಭಟನೆಗೆ ಕರೆ

| Published : Jun 08 2024, 12:30 AM IST

ಸಾರಾಂಶ

ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್‌ನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ತಾಲೂಕು ಹಾಗೂ ಕೊಡಗು ಗಡಿಭಾಗವನ್ನು ಹೊಂದಿಕೊಂಡಿರುವ ಹೊಸೂರ ಸುತ್ತಮುತ್ತಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ಆಯೋಜನೆ । ವಿವಿಧ ಸಂಘಟನೆ ಭಾಗಿ । ಕಾಫಿ ಎಸ್ಟೇಟಲ್ಲಿ ಶಾಶ್ವತ ನಿಷೇಧಕ್ಕೆ ಒತ್ತಾಯ

ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್‌ನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ತಾಲೂಕು ಹಾಗೂ ಕೊಡಗು ಗಡಿಭಾಗವನ್ನು ಹೊಂದಿಕೊಂಡಿರುವ ಹೊಸೂರ ಸುತ್ತಮುತ್ತಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿಯಿಂದ ಜೂ.8ಕ್ಕೆ ಪಕ್ಷಾತೀತವಾಗಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.

ಕೊಡಗಿನ ಜೊತೆ ಗಡಿಭಾಗವನ್ನು ಹಂಚಿಕೊಂಡಿರುವ ತಾಲೂಕಿನ ಯಸಳೂರು ಹೋಬಳಿ ವ್ಯಾಪ್ತಿಗೆ ಸೇರುವ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದಲ್ಲಿರುವ ರೋಡಿಕ್ ಕಾಫಿ ಎಸ್ಟೇಟ್ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿದೆ. ಈ ಪ್ರದೇಶವು ಸಮುದ್ರಮಟ್ಟಕ್ಕೆ ಸುಮಾರು ೪೫೦೦ ಅಡಿಗಳ ಎತ್ತರದಲ್ಲಿದ್ದು ಬೆಟ್ಟಗುಡ್ಡಗಳು, ಮರಗಿಡಗಳಿಂದ ಕೂಡಿದೆ. ಈ ಬೆಟ್ಟಗುಡ್ಡಗಳು ಹಾಗೂ ಮರ ಗಿಡಗಳು ಮಳೆ ಮಾರುತಗಳನ್ನು ತಡೆದು ಸುಮಾರು ೧೨೦ರಿಂದ ೨೫೦ ಇಂಚುಗಳ ತನಕ ಮಳೆ ಸುರಿಸುತ್ತವೆ.

ಈ ಪ್ರದೇಶವು ಕಾಡಾನೆ, ಕಾಡುಕೋಣ, ಕಾಡೆಮ್ಮೆ, ಜಿಂಕೆ, ಕಾಡುಹಂದಿ, ಮುಳ್ಳುಹಂದಿ, ಮೊಲ, ಪುನಗಿನಬೆಕ್ಕು, ಕಾಡುಬೆಕ್ಕು, ನಾಗರಹಾವು, ಹೆಬ್ಬಾವು, ಕಾಳಿಂಗಸರ್ಪ, ಹತ್ತಾರು ಬಗೆಯ ಹಾವುಗಳು, ನವಿಲು, ಕಾಡುಕೋಳಿಯಂತಹ ವನ್ಯಜೀವಿಗಳ ನೆಲೆಯಾಗಿದ್ದು ನೂರಾರು ಬಗೆಯ ಅಮೂಲ್ಯ ಪುಷ್ಪಗಳು, ಅಮೂಲ್ಯ ಗಿಡಮೂಲಿಕೆಗಳು, ಬೆಲೆಬಾಳುವ ಮರಗಳು ಈ ಪ್ರದೇಶದಲ್ಲಿವೆ.

ಲೋಕಸಭಾ ಚುನಾವಣೆಯ ಮೊದಲು ಗಣಿಗಾರಿಕೆಯನ್ನು ನಿಷೇಧ ಮಾಡದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಶೃತಿ, ತಹಸೀಲ್ದಾರ್ ಮೇಘನಾ ಆಗಮಿಸಿ ಗಣಿಗಾರಿಕೆಯನ್ನು ನಿಲ್ಲಿಸುವ ಭರವಸೆ ನೀಡಿದ್ದರು. ಇದೀಗ ಪುನ: ಕಲ್ಲು ಗಣಿಗಾರಿಕೆ ಆರಂಭವಾಗಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

ಗಣಿಗಾರಿಕೆ ನಿಷೇಧಕ್ಕೆ ಪಕ್ಷಾತೀತವಾಗಿ ಪ್ರತಿಭಟನೆ:

ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಈಗಾಗಲೆ ಕರ್ನಾಟಕ ಬೆಳೆಗಾರರ ಒಕ್ಕೂಟವು ಖಂಡಿಸಿದ್ದು ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರು, ಯಸಳೂರು ಹಾಗೂ ಕೊಡಗಿನ ತೋಳೂರು, ಶೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರ ನೇತೃತ್ವದಲ್ಲಿ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ರೋಡಿಕ್ ಕಾಫಿ ಎಸ್ಟೇಟ್‌ನಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸುವಂತೆ ಜೂ.೮ ರಂದು ಹೊಸೂರಿನ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೦ಗಂಟೆಗೆ ಬೃಹತ್ ಪ್ರತಿಭಟನೆ ಆಯೋಜಿಸಿದೆ.

ಶಾಸಕ ಸಿಮೆಂಟ್ ಮಂಜು, ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧಕ್ಷ ಡಾ.ಮೋಹನ್ ಕುಮಾರ್, ಉಪಾಧಕ್ಷ ಬೆಕ್ಕನಹಳ್ಳಿ ನಾಗರಾಜ್, ಮಡಿಕೇರಿ ಕಾವೇರಿ ಸೇನೆಯ ರವಿಚಂಗಪ್ಪ, ಕೊಡಗು ವಿಭಾಗದ ಕರ್ನಾಟಕ ರಾಜ್ಯ ರೈತ ಸಂಘದ ಅಧಕ್ಷ ಮನುಸೋಮಯ್ಯ, ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್, ಹೊಸೂರು ಗ್ರಾಪಂ ಅಧಕ್ಷೆ ಮಂಜುಳಾ ಮಂಜುನಾಥ್, ಉಪಾಧಕ್ಷೆ ಜಾನಕಿ, ಸಮಾಜ ಸೇವಕ ಕಾಮನಹಳ್ಳಿ ಕೀರ್ತಿ, ಜುಮ್ಮಾ ಮಸೀದಿ ಧರ್ಮಗುರು ಶಾಫಿ ಸ ಅದಿ, ಕಾವೇರಿ ಸೇನೆ ಅಧಕ್ಷ ಹೊಸಬೇಡು ಶಶಿ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

೨೦೦೨ ಇಸವಿಯಲ್ಲೆ ಅರಣ್ಯ ಪರಿಸರ, ಭೂವಿಜ್ಞಾನ ಗಣಿಗಾರಿಕೆ ಅಧಿಕಾರಿಗಳು ಈ ಭಾಗದಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧಿಸಿದ್ದರು. ಆದರೆ ಕೆಲವು ಕಾಣದ ಕೈಗಳು ಇಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಖಂಡನೀಯ, ಪಶ್ಚಿಮ ಘಟ್ಟದ ಉಳಿವಿಗಾಗಿ ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಬೇಕು.

ಗಣೇಶ್ ಹೊಸರಳ್ಳಿ, ಉಪಾಧಕ್ಷರು, ಕೃಷಿಕ ಸಮಾಜ.

ಗಣಿಗಾರಿಕೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರು ಮಾಡುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಪಶ್ಚಿಮ ಘಟ್ಟದ ಉಳಿವಿಗಾಗಿ ಅಧಿಕಾರಿಗಳು ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಈ ಭಾಗದಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧಿಸಬೇಕು.

ಸಿಮೆಂಟ್ ಮಂಜು, ಶಾಸಕ.ಫೋಟೋ1: ಸಕಲೇಶಪುರದ ಹೊಸೂರು ಗ್ರಾಪಂ ವ್ಯಾಪ್ತಿಯ ಹೊಸಕೋಟೆ ಬೆಟ್ಟ ಪ್ರದೇಶ ವ್ಯಾಪ್ತಿಯ ರೋಡಿಕ್ ಎಸ್ಟೇಟ್‌ನಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವುದು.