ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ೧೨ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟಕ್ಕೆ ಜಿಲ್ಲಾ ಮಹಾಸಭಾದ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭನವದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಬಹುದಿನಗಳ ಬೇಡಿಕೆಯಾಗಿದ್ದ ಮತ್ತು ವೀರಶೈವ ಲಿಂಗಾಯಿತರ ಸುಂದರ ಕನಸಾಗಿದ್ದ ಮತ್ತು ಅತ್ಯಂತ ಖುಷಿಕೊಡುವ ಸಂಗತಿ ಎಂದರೆ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಎಂದರು.ವೀರಶೈವ ಲಿಂಗಾಯತರ ಮಠಾಧೀಶರ ಹಾಗೂ ಬಸವಭಕ್ತರ ಮನವಿ ಮೇರೆಗೆ ಸರ್ಕಾರ ಈಗ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ್ದಾರೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡುವುದರ ಮೂಲಕ ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ವ್ಯಕ್ತಿಯನ್ನಾಗಿಸಿದ್ದು ಜಾತ್ಯಾತೀತ ಮನೋಭಾವ ತೋರಿಸುತ್ತದೆ ಎಂದರು,
ಬಸವ ಜಯಂತಿ ಕೇವಲ ವೀರಶೈವ ಲಿಂಗಾಯಿತರು ಆಚರಿಸುವಂತಿಲ್ಲ ಸಮಸ್ತ ಕನ್ನಡಿಗರು ಜಾತಿ ಮತ ಪಂಥ ಭೇದವಿಲ್ಲದೆ ದೀನ ದಲಿತ ಶೋಷಿತರೆಲ್ಲರೂ ಕೂಡಿ ಬಡವ ಶ್ರೀಮಂತರು ಎಂಬ ಭೇದಭಾವವಿಲ್ಲದೆ ಎಲ್ಲರು ಸೇರಿ ಬಸವಣ್ಣನವರ ಜಯಂತಿ ಆಚರಿಸಬೇಕು ಮತ್ತು ಸಾಂಸ್ಕೃತಿಕ ನಾಯಕನನ್ನು ಗೌರವಿಸಬೇಕು. ಬಸವಣ್ಣನವರ ಸಾವಿರಾರು ವಚನಗಳಲ್ಲಿ ಕನ್ನಡಿಗರ ಸಂಸ್ಕೃತಿ ಅಡಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಂಡವ ಬಸವಣ್ಣ ಸರ್ವರಿಗೆ ಸಮಪಾಲು ಸಮ ಬಾಳು ನೀಡಿದವ ಬಸವಣ್ಣ. ಜಾತಿ ಮತ ಪಂಥಗಳನ್ನು ಕಿತ್ತೆಸೆದು ಬಸವಣ್ಣ ಅನುಭವ ಮಂಟಪದ ಮೂಲಕ ಸಮಾನತೆ ಸಹೋದರತೆ ಮೂಲಕ ಬಸವಣ್ಣ ಹೆಣ್ಣು ಗಂಡು ಎಂಬ ಭೇದ ಭಾವ ಅಳಿಸಿ ಒಳಗೆ ಸುಳಿವ ಆತ್ಮ ಒಂದೇ ಎಂದು ಹೇಳಿ, ಸಕಲ ಜೀವಾತ್ಮರಿಗೆ ಲೇಸು ಬಯಸಿದಾತ ಬಸವಣ್ಣ ಎಂದರು,ತಮಿಳುನಾಡಿನಲ್ಲಿ ತಿರುವಳ್ಳವರನ್ನು ತಮಿಳುನಾಡಿನ ಸಾಂಸ್ಕೃತಿಕ ನಾಯಕ ಎಂದು ತಮಿಳುನಾಡಿನ ಸರಕಾರ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಶಿವಾಜಿಯನ್ನು ಸಾಂಸ್ಕೃತಿಕ ನಾಯಕ ಎಂಬ ಸ್ಥಾನಮಾನ ಗೌರವವನ್ನು ನೀಡಿ ಅವರ ಸಾಹಿತ್ಯ ಸಂಸ್ಕೃತಿ ಅರಿವು ಆಚಾರಗಳನ್ನು ಪ್ರಚಾರ ಮಾಡಿದ್ದಾರೆ. ಅದೆ ರೀತಿಯಲ್ಲಿ ವಿಶ್ವಗುರು ಬಸವಣ್ಣನವರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಬೇಕು. ಸಾಮಾಜಿಕ ಕಳಕಳಿ. ಸಾಂಸ್ಕೃತಿಕ ಚಿಂತನೆಗಳು ಹಾಗೂ ಶರಣ ಧರ್ಮ ತತ್ವ ಸಿದ್ಧಾಂತಗಳನ್ನು ಎಲ್ಲರಿಗೂ ಮುಟ್ಟಿಸುವ ವಿಚಾರವನ್ನು ಕರ್ನಾಟಕ ಸರ್ಕಾರ ಮಾಡಬೇಕು ಎಂದು ಮನವಿ ಮಾಡಿದರು.
ತಜ್ಞರ ಸಮಿತಿ ರಚಿಸಿ ಬಸವಣ್ಣನವರ ಕುರುಹುಗಳು ಮತ್ತು ಅವರ ಕಾರ್ಯಕ್ಷೇತ್ರ, ರಚಿಸಿದ ಸಾಹಿತ್ಯ, ನಿರ್ಮಿಸಿದ ಅನುಭವ ಮಂಟಪದ ಪರಿಕಲ್ಪನೆ ಇತ್ಯಾದಿಗಳನ್ನು ಕನ್ನಡಿಗರಿಗೆ ತಿಳಿ ಹೇಳಬೇಕು. ಆ ದಿಸೆಯಲ್ಲಿ ನಿರಂತರವಾದ ಪ್ರಯತ್ನ ಮುಂದುವರಿಯುತ್ತಿರಬೇಕು. ಆಗ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅರ್ಥಪೂರ್ಣವಾಗುತ್ತದೆ. ಇಲ್ಲದಿದ್ದರೆ ಅದು ಘೋಷಣಾ ವಾಕ್ಯವಾಗಿ ಉಳಿಯುತ್ತದೆ ಎಂದರು,ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ನಡೆಯುತ್ತಿದೆ. ಕೂಡಲಸಂಗಮ ಮತ್ತು ಬಸವಕಲ್ಯಾಣದಲ್ಲಿ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಸರಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವ ಮಹತ್ವದ ಆದೇಶವನ್ನು ಮಾಡಲಾಗಿದೆ, ಇದಕ್ಕೆ ಕಾರಣರಾದವರೆಲ್ಲರನ್ನು ಮಹಾಸಭಾ ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದರು.
ನಾಳೆ ಪ್ರತಿಭಾ ಪುರಸ್ಕಾರ:ಉಪಾಧ್ಯಕ್ಷ ಬಿ.ಎಂ. ಪ್ರಭುಸ್ವಾಮಿ ಮಾತನಾಡಿ ಜ. ೨೭ರ ಶನಿವಾರ ಮಧ್ಯಾಹ್ನ ೩ ಗಂಟೆಗೆ ಮಹಾಸಭಾ ವತಿಯಿಂದ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಬಸವರಾಜ ಸ್ವಾಮಿಗಳ ಅನುಭವ ಮಂಟಪದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಮತ್ತು ಹಾನಗಲ್ ಶಿವಕುಮಾರ ಸ್ವಾಮೀಯವರ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಸಮುದಾಯದ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಸಲುವಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.ಕಾರ್ಯಕ್ರಮವನ್ನು ಶಾಸಕ ಎಚ್. ಎಂ. ಗಣೇಶ್‌ಪ್ರಸಾದ್ ಉದ್ಘಾಟಿಸಲಿದ್ದು, ಹರವೆಯ ಸರ್ಪಭೂಷಣ ಸ್ವಾಮೀಜಿ, ನಗರದ ಚನ್ನಬಸವಸ್ವಾಮೀಜಿ, ಸೋಮಹಳ್ಳಿ ಸಿದ್ದಮಲ್ಲಸ್ವಾಮೀಜಿ ಮಹದೇಶ್ವರಬೆಟ್ಟದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಲಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ಗೌಡಹಳ್ಳಿ ಮರಿತೋಂಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರದಾನ ಕಾರ್ಯದರ್ಶಿ ರೇಣುಕಾಪ್ರಸನ್ನ, ಉಪಾಧ್ಯಕ್ಷ ಪರಿಮಳ ನಾಗಪ್ಪ, ಸದಸ್ಯ ಸುಜೇಂದ್ರ ಭಾಗವಹಿಸಲಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರುಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿರುತ್ತಾರೆ ಎಂದರು. ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರದಾನ ಕಾರ್ಯದರ್ಶಿ ಡಿ.ನಾಗೇಂದ್ರ, ನಿರ್ದೇಶಕರಾದ ಎನ್. ಆರ್. ಪುರುಷೋತ್ತಮ್, ಬಸವರಾಜು (ಕಂಠಿ) ಇದ್ದರು.