ಹೊಸದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನಲ್ಲಿ ಮಳೆ ಅಭಾವದಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಸಾವೆ, ರಾಗಿ, ಜೋಳ, ನವಣೆ ಸೇರಿದಂತೆ ಸಿರಿಧಾನ್ಯ ಬೆಳೆಗಳು ಒಣಗಿ ನಾಶವಾಗಿದ್ದು ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿ ಮಳೆಗಾಗಿ ಕಾಯುತ್ತಿರುವ ರೈತರಿಗೂ ಸರ್ಕಾರ ವಿಶೇಷ ಪರಿಹಾರ ಘೋಷಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್ ಆಗ್ರಹಿಸಿದರು.

ತಾಲೂಕಿನ ಕಸಬಾ, ಮಾಡದಕೆರೆ, ಶ್ರೀರಾಂಪುರ ಹಾಗೂ ಮುತ್ತೋಡು ಹೋಬಳಿಗಳ ಬರಪೀಡಿತ ಗ್ರಾಮಗಳಿಗೆ ರೈತ ಮೋರ್ಚಾ ತಂಡದೊಂದಿಗೆ ಹೊಲಗಳಿಗೆ ಭೇಟಿ ನೀಡಿ ಬೆಳೆ ನಷ್ಟವನ್ನು ಪರಿಶೀಲಿಸಿದ ಅವರು, ರೈತರ ಅಹವಾಲುಗಳನ್ನು ಆಲಿಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸದುರ್ಗ ತಾಲೂಕು ಸಂಪೂರ್ಣ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿರುವ ಪ್ರದೇಶವಾಗಿದೆ. ಮುಂಗಾರು ವೈಫಲ್ಯದಿಂದ ರೈತರು ಸಾಲ ಮಾಡಿ ಖರೀದಿಸಿದ ಬೀಜ, ಗೊಬ್ಬರ ಹಾಗೂ ಕೃಷಿ ವೆಚ್ಚವೆಲ್ಲವೂ ವ್ಯರ್ಥವಾಗಿದೆ. ಈ ಬೆಳೆಗಳು ಕೈಕೊಟ್ಟಿರುವುದರಿಂದ ರೈತ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಕಾರ್ಮಿಕರಿಗೂ ಉದ್ಯೋಗದ ಅಭಾವ ಉಂಟಾಗಿದೆ ಎಂದರು.

ಕೇಂದ್ರ ಸರ್ಕಾರದ ಬೆಳೆವಿಮೆ ಯೋಜನೆಯ ಕುರಿತು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಜಾಗೃತಿ ಮೂಡಿಸದ ಪರಿಣಾಮ ತಾಲೂಕಿನಲ್ಲಿ ಕೇವಲ 363 ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಸಾವಿರಾರು ರೈತರು ಯೋಜನೆಯಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ಅಲ್ಲದೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿದ 4,979 ರೈತರಿಗೆ ಒಟ್ಟು 57.50 ಕೋಟಿ ರು. ಹಣ ನೀಡಬೇಕಿದ್ದು ರಾಗಿ ಬಿಟ್ಟು 2 ತಿಂಗಳಾದರೂ ಹಣ ನೀಡಿಲ್ಲ ಇನ್ನೆರೆಡು ದಿನದಲ್ಲಿ ಹಣ ನೀಡದಿದ್ದರೆ ತಾಲೂಕು ಕಚೇರಿ ಮುಂದೆ ರೈತರೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸರ್ಕಾರ ತಕ್ಷಣ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ಸರ್ಕಾರ ತಕ್ಷಣದಿಂದಲೇ ರೈತರ ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಗೋಶಾಲೆ ಪ್ರಾರಂಭಿಸಬೇಕು ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ತಂಡಗಳನ್ನು ಕಳುಹಿಸಿ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ವರದಿ ಆಧರಿಸಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಬೇಕು. ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಿ ಹೆಚ್ಚಿನ ರೈತರಿಗೆ ಅವಕಾಶ ಕಲ್ಪಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಿ.ಎಸ್.ಪ್ರದೀಪ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಲಿಂಗದೇವರು, ಮಂಡಲ ರೈತ ಮೋರ್ಚಾ ಅಧ್ಯಕ್ಷ ಮನು ಕುಮಾರ್ ಉಪಾಧ್ಯಕ್ಷ ಚಿತ್ರಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪಾಟೀಲ್, ಮಲ್ಲಿಕಾರ್ಜುನ್, ಈಶ್ವರ್, ಪ್ರಕಾಶ್, ತಿಪ್ಪೇಶ್, ಸಚಿನ್, ಹಾಗೂ ಬಿಜೆಪಿ ರೈತ ಮೋರ್ಚ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.