- ರಾಜ್ಯ ಸರ್ಕಾರಕ್ಕೆ ಎಂ.ಪಿ.ರೇಣುಕಾಚಾರ್ಯ ಆಗ್ರಹ । ಬೇಲಿಮಲ್ಲೂರಲ್ಲಿ ಎಸ್‌ಐಆರ್ ಜನಜಾಗೃತಿ ಸಭೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದೆ. ಇದರಿಂದ ರೈತರು ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ರಾಜ್ಯ ಸರ್ಕಾರ ಈಗಲಾದರೂ ರೈತರ ಸಮಸ್ಯೆ ಮನಗಂಡು ಅವಳಿ ತಾಲೂಕಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಜುಲೈ 22ರಂದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆ ಹಾಗೂ ಎಸ್‌ಐಆರ್ ಬಗೆಗಿನ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ರೈತರ ನೆರವಿಗೆ ಧಾವಿಸಿ ಒಂದು ಬಾರಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲಿ. ಆಗ ರೈತರು ನಿರಾಳರಾಗುತ್ತಾರೆ. ಇಲ್ಲದಿದ್ದರೆ ಅವರ ಶಾಪ ನಿಮಗೆ ತಟ್ಟದೇ ಬಿಡದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ತುಂಬುತ್ತಿದೆ. ಆದರೆ ರೈತರು, ಜನಸಾಮಾನ್ಯರ ಹಿತ ಕಾಪಾಡುವ ಯಾವುದೇ ಗುರುತರವಾದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಚುನಾವಣೆಗೂ ಮುನ್ನ ನೀವು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಅದರಲ್ಲೂ ಗ್ಯಾರಂಟಿ ಯೋಜನೆಗಳು ಸಕಾಲಕ್ಕೆ ಸಮರ್ಪಕವಾಗಿ ನೀಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು.
ಸಾಮಾಜಿಕ ಭದ್ರತೆ ಯೋಜನೆಯಡಿ ನೀಡುತ್ತಿದ್ದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನವನ್ನು ನಿಲ್ಲಿಸಲಾಗಿದೆ. ಸರ್ಕಾರದಿಂದ ಬರುತ್ತಿದ್ದ ಪಿಂಚಣಿ ಹಣವನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಪಾಡೇನು? ಈ ಬಗ್ಗೆ ಸರ್ಕಾರ ಅವೈಜ್ಞಾನಿಕ ಉತ್ತರ ನೀಡುವ ಬದಲು ಮೊದಲು ಅವರಿಗೆಲ್ಲ ಮೊದಲಿನಂತೆ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ:ಹೊನ್ನಾಳಿ ಅವಳಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಹಣ ಬಿಡುಗಡೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ರೈತರಿಗೆ ನೀಡಬೇಕಾದ ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ, ಅರ್ಹ ಬಡ ಕುಟುಂಬಗಳಿಗೆ ಆಶ್ರಯ ಮನೆ ಹಾಗೂ ಬಿಪಿಎಲ್ ಕಾರ್ಡಗಳನ್ನು ನೀಡಬೇಕು ಎಂದು ಆಗ್ರಹಿಸಿ ಹೊನ್ನಾಳಿ ಟಿ.ಬಿ. ವೃತ್ತದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಹಾಗೂ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ರೈತರು ಸಾಮಾಜಿಕ ಭದ್ರತೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಸ್.ಎಸ್. ಬೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ್, ಸಿದ್ದಪ್ಪ ಹಾಗೂ ಇತರರು ಇದ್ದರು.- - -
-19ಎಚ್.ಎಲ್.ಐ1:ಜನಜಾಗೃತಿ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತನಾಡಿದರು.