ಕುಂದಗೋಳ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಂಭವಿಸಿರುವ ಬೆಳೆಹಾನಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು.
ಕುಂದಗೋಳ:
ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬೆಳೆಗಳು ಬಾಡಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದರು.ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲು ಬುಧವಾರ ರೈತರು ಬಾಡಿದ ಬೆಳೆಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಸೀಲ್ದಾರ್ ರಾಜು ಮಾವರಕರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಂಭವಿಸಿರುವ ಬೆಳೆಹಾನಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಹಲವು ರೈತರಿಗೆ ಬಿಡುಗಡೆಯಾಗದೆ ಬಾಕಿ ಉಳಿದಿರುವ ಬೆಳೆ ವಿಮೆ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ರೈತ ಮುಖಂಡರಾದ ಗುರುಪಾದಪ್ಪ ಬಂಕದ, ಬಸನಗೌಡ್ರ ಹೊಸಮನಿ, ಪರಮೇಶಪ್ಪ ನಾಯ್ಕರ, ಡಿ.ಬಿ. ಪಾಟೀಲ, ಶಂಕರಗೌಡ ಪಾಟೀಲ, ಬಸಣ್ಣ ಸಂಭೋಜಿ, ಶಿದ್ದಯ್ಯ ಕಟ್ನೂರಮಠ, ಶಿವಾನಂದ ಮಾಯಕಾರ, ಫಕ್ಕಿರಪ್ಪ ಪೂಜಾರ, ಬಸಣ್ಣ ದೊಡ್ಡನಾಯ್ಕರ, ಷಣ್ಮುಖಯ್ಯ ಚಿಕ್ಕಮಠ, ಮಾನಪ್ಪ ಕಮ್ಮಾರ, ಈರಣ್ಣ ಕುರ್ತಕೋಟಿ, ದೇವಕ್ಕ ಪತ್ತಾರ, ರೇಣುಕಾ ಹುಯಿಲಗೋಳ, ವಿಠ್ಠಲ್ ಘಾಟಗೆ, ಗುರುನಾಥ ಹೊನ್ನಿಹಳ್ಳಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.