ಕನ್ನಡಪ್ರಭ ವಾರ್ತೆ ತುರುವೇಕೆರೆ
ತುರುವೇಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರವನ್ನು ಒತ್ತಾಯಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ ವೇಳೆಗೆ ಸಮೃದ್ಧಿಯಾಗಿ ಮಳೆ ಆಗಬೇಕಿತ್ತು. ಆದರೆ ಶೇ. 30ರಷ್ಟು ಸಹ ಮಳೆ ಆಗದೇ ರೈತಾಪಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈಗಿರುವ ಬೋರ್ ವೆಲ್ ಗಳು ಅಂತರ್ಜಲವಿಲ್ಲದೇ ಒಣಗುತ್ತಿದೆ. ತಾಲೂಕಿನಲ್ಲಿ ಸಾವಿರಾರು ಅಡಿ ಕೊರೆದರೂ ಸಹ ನೀರು ದೊರಕುತ್ತಿಲ್ಲ. ತಾಲೂಕಿನಲ್ಲಿರುವ ನೂರಾರು ಕೆರೆ ಕಟ್ಟೆಗಳು ನೀರಿಲ್ಲದೇ ಬಣಗುಡುತ್ತಿವೆ. ಮಳೆ ಇಲ್ಲದ ಕಾರಣ ರೈತಾಪಿಗಳು ಬೆಳೆದಿದ್ದ ಬೆಳೆಗಳು ನೆಲ ಕಚ್ಚಿವೆ. ಬಿತ್ತಿದ್ದ ಬೀಜಗಳು ಮೊಳಕೆಯೊಡೆಯದೇ ಭೂಮಿಯಲ್ಲೇ ಕೊಳೆತು ಹೋಗಿವೆ. ನಮ್ಮ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆ ಬೆಳೆಗೂ ನೀರಿನ ತತ್ವಾರ ಪ್ರಾರಂಭವಾಗಿದೆ. ಒಂದೆಡೆ ವಿದ್ಯುತ್ ತೊಂದರೆ, ವಿದ್ಯುತ್ ಇದ್ದರೂ ಸಹ ಬೋರ್ ವೆಲ್ ಗಳಲ್ಲಿ ನೀರಿಲ್ಲದೇ ರೈತರು ಹೈರಾಣರಾಗಿದ್ದಾರೆ. ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಹಾಗಾಗಿ ಸರ್ಕಾರ ಕೂಡಲೇ ನಮ್ಮ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
30ರಂದು ತಿಥಿ ಕಾರ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನವರ ತಿಥಿ ಕಾರ್ಯ ಜು. 30 ರಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಖುದ್ದಾಗಿ ದೇವೇಗೌಡರೇ ನಮ್ಮ ತಾಲೂಕಿನ ಜನತೆಗೆ ಈ ಕಾರ್ಯಕ್ಕೆ ಆಗಮಿಸಬೇಕೆಂದು ಆಹ್ವಾನಿಸಿದ್ದಾರೆ. ಹಾಗಾಗಿ ನಮ್ಮ ಜೆಡಿಎಸ್ ಕಾರ್ಯಕರ್ತರು ತಾಲೂಕಿನ ಪ್ರತಿಯೊಂದು ಮನೆಗೂ ಪಕ್ಷಾತೀತವಾಗಿ ಖುದ್ದಾಗಿ ಭೇಟಿ ನೀಡಿ ಆಹ್ವಾನ ಪತ್ರಿಕೆಯನ್ನು ನೀಡಲಿದ್ದಾರೆ. ಹಾಗಾಗಿ ಚನ್ನಮ್ಮನವರ ಅಭಿಮಾನಿಗಳು ಮತ್ತು ದೇವೇಗೌಡರ ಅಭಿಮಾನಿಗಳು ಈ ತಿಥಿ ಕಾರ್ಯಕ್ಕೆ ಆಗಮಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಕೋರಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನವರ ಅಂತ್ಯ ಸಂಸ್ಕಾರದ ವೇಳೆ ಸರ್ಕಾರದ ಸಕಲ ಗೌರವವನ್ನು ನೀಡಿ ಚನ್ನಮ್ಮನವರ ಅಂತ್ಯಕ್ರಿಯೆ ನಡೆಸಿದುದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಈ ವೇಳೆ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಜೆಡಿಎಸ್ ಪಕ್ಷದ ಮುಖಂಡರಾದ ಬಡಗರಹಳ್ಳಿ ತ್ಯಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು, ರಾಮಕೃಷ್ಣಯ್ಯ, ಬಿ.ಪುರ ಚಲುವರಾಜು, ಮುನಿಯೂರು ರಂಗಸ್ವಾಮಿ, ಹೆಡಿಗೀಹಳ್ಳಿ ವಿಶ್ವನಾಥ್, ಮಾದಿಹಳ್ಳಿ ಕಾಂತರಾಜು, ಕಣತೂರು ಸತೀಶ್, ತೋವಿನಕೆರೆ ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.