ಸಾರಾಂಶ
ಹಾವೇರಿ:ಕೆಲವು ವರ್ಷಗಳ ಹಿಂದೆ ಜಿಲ್ಲೆಯ ರೈತರನ್ನು ಆಕರ್ಷಿಸಿದ್ದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯುವ ಪ್ರದೇಶ ಗಣನೀಯವಾಗಿ ಕ್ಷೀಣಿಸುತ್ತಿದೆ. ಮಳೆ, ಬರಗಾಲ ಸೇರಿದಂತೆ ಪ್ರಕೃತಿ ವಿಕೋಪ, ಕಳಪೆ ಬೀಜ, ಕೀಟಬಾಧೆ, ಕೃಷಿ ಕಾರ್ಮಿಕರ ಕೊರತೆಯಿಂದ ಬೇಸತ್ತ ರೈತರು ಹತ್ತಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೩.೨೭ ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ ಪ್ರತಿವರ್ಷ ಶೇ. ೬೦ಕ್ಕಿಂತ ಅಧಿಕ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಕಬ್ಬನ್ನು ಬೆಳೆಯುತ್ತಿದ್ದರು. ಅದರಲ್ಲಿಯೂ ಬಿಟಿಹತ್ತಿ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹತ್ತಿ ಬೆಳೆ ಕ್ಷೇತ್ರದಲ್ಲಿ ಗಣನೀಯವಾಗಿ ಕುಸಿತ ಕಂಡುಬಂದಿದೆ.ಜನಪ್ರಿಯತೆ ಗಳಿಸಿದ್ದ ಬಿಟಿ ಹತ್ತಿ: ೧೦-೧೫ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬಿಟಿ ಹತ್ತಿ ಬೆಳೆ ಹೆಚ್ಚಿನ ಕ್ಷೇತ್ರವನ್ನು ವ್ಯಾಪಿಸಿತ್ತು. ಮುಂಗಾರು ಬಿತ್ತನೆ ಸಮಯದಲ್ಲಿ ಬಿಟಿ ಹತ್ತಿ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಮುಗಿಬೀಳುತ್ತಿದ್ದರು. ಬಿಟಿ ಹತ್ತಿ ಬೀಜಗಳನ್ನು ಹೊಡೆದಾಡಿ, ರಾತ್ರಿ ಇಡೀ ಸರದಿಯಲ್ಲಿ ನಿಂತು ಪಡೆಯುತ್ತಿದ್ದರು. ಕೆಲವು ರೈತರಂತೂ ಆಹಾರ ಬೆಳೆಗಳ ಕೃಷಿಯನ್ನೇ ಕೈಬಿಟ್ಟು ಬಿಟಿಹತ್ತಿಯನ್ನೇ ಬಿಳಿ ಚಿನ್ನ ಎಂದು ಭಾವಿಸಿ ಬೆಳೆಯುತ್ತಿದ್ದರು. ಆದರೆ, ಬರ, ನೆರೆ, ಇಳುವರಿ ಕುಂಠಿತ, ಬೆಲೆಕುಸಿತ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಬಿಟಿಹತ್ತಿ ಕೈಬಿಟ್ಟಿದ್ದಾರೆ.ಬಿತ್ತನೆ ಕ್ಷೇತ್ರದಲ್ಲಿ ಕುಸಿತ:ಐದಾರು ವರ್ಷಗಳ ಹಿಂದೆ ಕಳಪೆ ಬೀಜ, ಕೀಟಬಾಧೆ ಸೇರಿದಂತೆ ಅನೇಕ ಕಾರಣಗಳಿಂದ ಬಿಟಿಹತ್ತಿಯು ಸಮರ್ಪಕವಾಗಿ ಇಳುವರಿಯೇ ಬರಲಿಲ್ಲ. ಕೆಲವು ರೈತರ ಜಮೀನಿನಲ್ಲಂತೂ ಆಳೆತ್ತರಕ್ಕೆ ಹತ್ತಿಗಿಡಗಳು ಬೆಳೆದರೂ ಹೂ, ಕಾಯಿ ಬಿಡಲಿಲ್ಲ. ಇದರಿಂದ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಪರಿಣಾಮ ಸರ್ಕಾರ ಮಧ್ಯಪ್ರವೇಶಿಸಿ ಬಿಟಿಹತ್ತಿ ಬೆಳೆಹಾನಿಗೆ ಹೆಕ್ಟೇರ್‌ಗೆ ₹೬ ಸಾವಿರ ಪರಿಹಾರ ನೀಡಿತು. ಆದರೆ, ರೈತರು ಬಿಟಿಹತ್ತಿ ಬೆಳೆದು ದೊಡ್ಡ ಪ್ರಮಾಣದಲ್ಲಿ ಕೈಸುಟ್ಟುಕೊಂಡಿದ್ದರು. ಅಲ್ಲದೇ ಕೆಲವು ಭಾಗದಲ್ಲಿ ಬಿಟಿಹತ್ತಿ ಸಮರ್ಪಕವಾಗಿ ಬೆಳೆಯಲಿಲ್ಲ. ಇದರಿಂದಲೂ ರೈತರು ಹಾನಿ ಅನುಭವಿಸಿದರು. ಅದರ ಜತೆಗೆ ಪದೇ ಪದೇ ಬಿಟಿಹತ್ತಿಯನ್ನೇ ಬಿತ್ತನೆ ಮಾಡಿದ್ದು, ಬೆಳೆ ಬದಲಾವಣೆ ಇಲ್ಲದೇ ಇರುವುದರಿಂದಲೂ ಇಳುವರಿ ಮೇಲೆ ಪರಿಣಾಮ ಬೀರಿತು. ಹೀಗಾಗಿ ಜಿಲ್ಲೆಯಲ್ಲಿ ೧.೫೦ ಲಕ್ಷ ಹೆಕ್ಟೇರ್‌ನಷ್ಟಿದ್ದು ಬಿಟಿಹತ್ತಿ ಬಿತ್ತನೆ ಪ್ರದೇಶ ಇತ್ತೀಚಿನ ವರ್ಷಗಳಿಂದ ಕಡಿಮೆಯಾಗುತ್ತಾ ಬಂದಿದೆ. ಈ ವರ್ಷ ೨೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.ತೀರಾ ಕುಸಿತ:೨೦೧೪ರಲ್ಲಿ ೧.೫೦ ಹೆಕ್ಟೇರ್ ಪ್ರದೇಶದ ಗುರಿಗೆ ೧.೦೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ೨೦೧೫ರಲ್ಲಿ ೧.೦೪ ಹೆಕ್ಟೇರ್ ಪ್ರದೇಶದ ಗುರಿಗೆ ೭೩ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ, ೨೦೧೬ರಲ್ಲಿ ೮೮೨೫೦ ಹೆಕ್ಟೇರ್ ಪ್ರದೇಶದ ಗುರಿಗೆ ೭೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ೨೦೧೭ರಲ್ಲಿ ೭೦ ಸಾವಿರ ಹೆಕ್ಟೇರ್ ಪ್ರದೇಶದ ಗುರಿಗೆ ೩೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಹೀಗೆ ವರ್ಷದಿಂದ ವರ್ಷಕ್ಕೆ ಹತ್ತಿ ಕ್ಷೇತ್ರ ಕುಸಿಯುತ್ತಲೇ ಬರುತ್ತಿದೆ.
ಮೆಕ್ಕೆಜೋಳಕ್ಕೆ ಜೋತು ಬಿದ್ದ ರೈತ:ಜಿಲ್ಲೆಯಲ್ಲಿ ಹತ್ತಿ ಬದಲು ರೈತರು ಮೆಕ್ಕಜೋಳ, ತೊಗರಿ, ಜೋಳ, ಹೆಸರು, ಶೇಂಗಾ, ಸೋಯಾಬಿನ್ ಬೆಳೆಗಳತ್ತ ಮುಖ ಮಾಡಿದ್ದಾರೆ. ಅಲ್ಲದೇ ಹತ್ತಿ ಕ್ಷೇತ್ರವನ್ನೆಲ್ಲ ಮೆಕ್ಕೆಜೋಳ ಆವರಿಸುತ್ತಿದೆ. ೧ ಲಕ್ಷ ಹೆಕ್ಟೇರ್ ಪ್ರದೇಶದ ಆಸುಪಾಸಿನಲ್ಲಿ ಮಾತ್ರ ಬಿತ್ತನೆಯಾಗುತ್ತಿದ್ದ ಮೆಕ್ಕೆಜೋಳ ಈಗ ೨ ಲಕ್ಷಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗುತ್ತಿದೆ. ಕೆಲ ಹೊಲಗಳಲ್ಲಿ ಮೇಲಿಂದ ಮೇಲೆ ಬೆಳೆ ಬದಲಾಯಿಸದೇ ಬರೀ ಮೆಕ್ಕೆಜೋಳ ಬಿತ್ತನೆ ಮಾಡುತ್ತಿರುವುದರಿಂದ ಕೀಟಬಾಧೆ, ವಿವಿಧ ಪ್ರಕಾರದ ಕಳೆ ಕಾಣಿಸಿಕೊಳ್ಳುತ್ತಿದೆ.ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಕ್ಷೇತ್ರ ಕಡಿಮೆಯಾಗುತ್ತಿದೆ. ಇತರೆ ಬೆಳೆಗಳಿಗೆ ಹೋಲಿಸಿದರೆ ಹತ್ತಿ ಬೆಳೆಯಲು ಕೃಷಿ ಕಾರ್ಮಿಕರು ಹಾಗೂ ಖರ್ಚು ಹೆಚ್ಚು. ಹೀಗಾಗಿ ಹತ್ತಿ ಬೆಳೆಯುವ ಕ್ಷೇತ್ರ ಕಡಿಮೆಯಾಗಿರಬಹುದು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಕ್ಷೇತ್ರದಲ್ಲಿ ಹತ್ತಿ ಬಿತ್ತನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.