ಸಾರಾಂಶ
ಬಂಗಾರಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ೩೦ಹಾಸಿಗೆಗಳಿಂದ ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ೭ವರ್ಷಗಳಾದರೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಅಗತ್ಯವಾಗಿ ಬೇಕಾಗಿದ್ದು ಪ್ರತ್ಯೇಕ ಐಸೋಲೇಷನ್ ವಾರ್ಡ್ ಇರಲಿಲ್ಲ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಹಲವು ವರ್ಷಗಳಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್,ಹಾಗೂ ಡಯಾಲಿಸಿಸ್ ಘಟಕವನ್ನು ಆರಂಭಿಸಬೇಕೆಂದು ರೋಗಿಗಳ ಬೇಡಿಕೆಗೆ ಕೊನೆಗೂ ಕಂಕಣ ಕೂಡಿ ಬಂದಿದ್ದು ಮಾ. 6ರಂದು ಬುಧವಾರ ಎರಡೂ ಬೇಡಿಕೆಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೋಕಾರ್ಪಣೆ ಮಾಡಲಿದ್ದಾರೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ೩೦ಹಾಸಿಗೆಗಳಿಂದ ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ೭ವರ್ಷಗಳಾದರೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಅಗತ್ಯವಾಗಿ ಬೇಕಾಗಿದ್ದು ಪ್ರತ್ಯೇಕ ಐಸೋಲೇಷನ್ ವಾರ್ಡಿಲ್ಲದೆ ಸಾಮಾನ್ಯ ವಾರ್ಡುಗಳಲ್ಲೆ ಕೊರೋನಾ ಸೇರಿದಂತೆ ಸಾಂಕ್ರಾಮಿಕ ರೋಗಿಗಳನ್ನು ಇರಿಸಿ ಚಿಕಿತ್ಸೆ ನೀಡುವಂತಾಗಿತ್ತು, ಅದೇ ರೀತಿ ಡಯಾಲಿಸಿಸ್ ಘಟಕವಿಲ್ಲದೆ ಮಧುಮೇಹ ರೋಗಿಗಳು ದುಬಾರಿ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವಂತಾಗಿತ್ತು.7 ವರ್ಷಗಳ ಬಳಿಕ ಸ್ಥಾಪನೆ
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ೭ವರ್ಷಗಳೇ ಕಳೆದಿದೆ ಅಂದಿನಿಂದಲೂ ಈ ಎರಡೂ ಬೇಡಿಕೆಗಳನ್ನು ಆರಂಭಿಸುವುದಾಗಿ ಜನಪ್ರತಿನಿಧಿಗಳು ಹೇಳುತ್ತಿದ್ದರೂ ಕಾಲ ಕೂಡಿ ಬಂದಿರಲಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಬಡ ರೋಗಿಗಳಿಗೆ ದೊರೆಯುತ್ತಿದೆ, ನಿತ್ಯ ಒಂದು ಸಾವಿರಕ್ಕೂ ಹೆಚ್ಚಿನ ಹೊರ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೨ ಹಾಸಿಗೆಗಳ ಐಸೋಲೇಷನ್ ವಾರ್ಡು ಹಾಗೂ ಡಯಾಲಿಸಿಸ್ ಘಟಕ ಉದ್ಘಾಟನೆಗೆ ಆಗಮಿಸುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಲು ಮುಂದಾಗಿದ್ದಾರೆ.