9ರಂದು ಕಟೀಲು ಕ್ಷೇತ್ರದಲ್ಲಿ ದೀಪೋತ್ಸವ, ಯಕ್ಷ ಸಪ್ತಾಹಕ್ಕೆ ಚಾಲನೆ

| Published : Nov 06 2025, 03:00 AM IST

9ರಂದು ಕಟೀಲು ಕ್ಷೇತ್ರದಲ್ಲಿ ದೀಪೋತ್ಸವ, ಯಕ್ಷ ಸಪ್ತಾಹಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನ.9ರಂದು ದೀಪೋತ್ಸವ ನಡೆಯಲಿದ್ದು, ಕಟೀಲು ದೇವಳದ ಯಕ್ಷಗಾನ ಮಂಡಳಿಯ ಏಳು ಮೇಳಗಳ ತಿರುಗಾಟ ನ.16ರಿಂದ ಆರಂಭವಾಗಲಿದೆ.

ಮೂಲ್ಕಿ: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನ.9ರಂದು ದೀಪೋತ್ಸವ ನಡೆಯಲಿದ್ದು, ಕಟೀಲು ದೇವಳದ ಯಕ್ಷಗಾನ ಮಂಡಳಿಯ ಏಳು ಮೇಳಗಳ ತಿರುಗಾಟ ನ.16ರಿಂದ ಆರಂಭವಾಗಲಿದೆ.ನ.9ರಿಂದ ನೂತನ ಮೇಳದ ಉದ್ಘಾಟನೆಯ ಅಂಗವಾಗಿ ಯಕ್ಷ ಸಪ್ತಾಹ ನಡೆಯಲಿದೆ. ನ.9ರಂದು ಸರಸ್ವತೀ ಸದನದಲ್ಲಿ ಸಂಜೆ 4ರಿಂದ 7ರ ತನಕ ಕಟೀಲು ಮೇಳಗಳ ಬಯಲಾಟಗಳ ಸೇವಾದಾರರ ಸಮಾವೇಶ ನಡೆಯಲಿದೆ. ಕಟೀಲು ಮೇಳವು ವಾರ್ಷಿಕ 1100ರಷ್ಟು ಬಯಲಾಟಗಳನ್ನು ಪ್ರದರ್ಶಿಸುತ್ತಿದ್ದು, ಈ ಬಾರಿ ಒಂದು ಮೇಳ ಹೆಚ್ಚಾಗಿರುವುದರಿಂದ ಪ್ರಸ್ತುತ ಸಾಲಿನಲ್ಲಿ ಬಯಲಾಟಗಳ ಸಂಖ್ಯೆ 1300 ಆಗಲಿದೆ. ಇದಲ್ಲಿ 450 ಮಂದಿ ಕಾಯಂ ಸೇವಾದಾರರು, 250ಕ್ಕೂ ಮಿಕ್ಕಿ ಹತ್ತು ಸಮಸ್ತರ ಆಟಗಳು, ಅಂದರೆ ಎರಡು ಮೇಳಗಳಿಗೆ ಪೂರ್ತಿ ತಿರುಗಾಟಕ್ಕೆ ಆಗುವಷ್ಟು ಕಾಯಂ ಆಟಗಳೇ ಇದೆ.

ವೀಳ್ಯ ಪಡೆಯದೆ ಯಕ್ಷಗಾನ ಸೇವೆ:ಮಂಗಳೂರಿನ ಉರ್ವಸ್ಟೋರ್‌ನ ಜಯಪ್ರಕಾಶ್ ಅವರದ್ದು 75 ವರ್ಷಕ್ಕಿಂತಲೂ ಹೆಚ್ಚು ವರ್ಷಗಳಿಂದ ಸೇವೆಯಾಟ ನಡೆಯುತ್ತಾ ಬಂದಿದೆ. ಪದ್ಮನೂರು, ಪೆರ್ಮುದೆ, ಕೈಕಂಬ, ಎಕ್ಕಾರು, ಕುಳಾಯಿ, ಪಕ್ಷಿಕೆರೆ, ಕಿಲೆಂಜೂರು, ಕಿನ್ನಿಗೋಳಿ, ಗಂಪಮನೆ ಹೀಗೆ 50 ವರ್ಷಗಳಿಗೂ ಮಿಕ್ಕಿ ಆಟ 70ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ನಡೆಯುತ್ತಿವೆ. ಪೊಳಲಿ ದೇವಸ್ಥಾನ, ತೋಕೂರು ದೇವಸ್ಥಾನ ಸೇರಿದಂತೆ ಕೆಲವು ಕಡೆ ವೀಳ್ಯ ಪಡೆಯದೆ ಮೇಳದ ಕಡೆಯಿಂದಲೇ ಸೇವೆಯಾಟಗಳು ನಡೆಯುತ್ತಿರುವುದು ವಿಶೇಷ.

ಸರ್ವ ಧರ್ಮೀಯರಿಂದ ಯಕ್ಷಗಾನ ಸೇವೆ:

ಹಿಂದೂಗಳು ಮಾತ್ರವಲ್ಲದೆ ಕ್ರೈಸ್ತರು, ಮುಸ್ಲಿಮರಲ್ಲೂ ಕಾಯಂ ಆಗಿ ಸೇವೆಯಾಟ ನಡೆಸುವುದನ್ನು ಕಟೀಲು ಮೇಳದಲ್ಲಿ ಕಾಣಬಹುದು. ಬಡವರು, ಶ್ರೀಮಂತರೆಂಬ ಭೇದವಿಲ್ಲದೆ ಕಟೀಲಮ್ಮನೆಡೆ ಇರುವ ಅನನ್ಯ ಭಕ್ತಿಯಿಂದ ವರ್ಷಂಪ್ರತಿ ಆಟ ಆಡಿಸುತ್ತಾರೆ.ಆಟಕ್ಕಾಗಿ ವಿದೇಶದಿಂದಲೂ ಬರುತ್ತಾರೆ:

ಮುಂಬೈ, ದುಬೈ, ಹೊರ ಜಿಲ್ಲೆಗಳಲ್ಲಿ ನೆಲೆಸಿರುವವರು ಕಟೀಲು ಮೇಳದ ಯಕ್ಷಗಾನಕ್ಕಾಗಿಯೇ ಊರುಗಳಿಗೆ ಬರುವವರಿದ್ದಾರೆ. ಹೀಗೆ ಕಾಯಂ ಆಗಿ ಆಟವಾಡಿಸುವ ಸೇವಾದಾರರ ಸಮಾವೇಶ ಮೊದಲ ಬಾರಿಗೆ ಕಟೀಲಿನಲ್ಲಿ ನಡೆಯಲಿದೆ.ಉದ್ಘಾಟನಾ ಕಾರ್ಯಕ್ರಮ:

ನ.9ರಂದು ಸಪ್ತ ಮೇಳಗಳ ತಿರುಗಾಟ ಆರಂಭೋತ್ಸವ ಯಕ್ಷ ಸಪ್ತಾಹ, ಕಟೀಲು ಮೇಳಗಳ ಬಯಲಾಟಗಳ ಕಾಯಂ ಸೇವಾದಾರರ ಸಮಾವೇಶ ನಡೆಯಲಿದ್ದು, ಸಪ್ತಾಹದ ಉದ್ಘಾಟನೆಯನ್ನು ಬಜಪೆ ರಾಘವೇಂದ್ರ ಆಚಾರ್ಯ, ಸಮಾವೇಶವನ್ನು ಜಯಪ್ರಕಾಶ್ ರಾವ್ ಉದ್ಘಾಟಿಸುವರು.

ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಅಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ಸತೀಶ್ ಶೆಟ್ಟಿ ಪಡುಬಿದ್ರಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಮಂಗಲ್ಪಾಡಿ ನರೇಶ್ ಶೆಣೈ, ಶ್ರೀನಾಥ್ ಕದ್ರಿ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.