ನದಿಗಳ ಮಾಲಿನ್ಯದಿಂದ ಮನುಷ್ಯರ ಅಧೋಗತಿ: ಪರಿಸರ ತಜ್ಞೆ ನಿರ್ಮಲಾಗೌಡ

| Published : Jun 29 2024, 12:33 AM IST

ಸಾರಾಂಶ

ನದಿಗಳ ಮಾಲಿನ್ಯ ಕೇವಲ ನೀರಿನ ಕಲುಶತೆಯನ್ನುತೋರಿಸುತ್ತಿಲ್ಲ. ಬದಲಾಗಿ ಮನುಷ್ಯರ ಅಧೋಗತಿ ಹಾಗೂ ಮನುಷ್ಯರ ಮನಸ್ಸಿನ ಕಲ್ಮಶವನ್ನು ತೋರಿಸುತ್ತಿದೆ ಎಂದು ಪರಿಸರ ತಜ್ಞೆ ನಿರ್ಮಲಾಗೌಡ ತಿಳಿಸಿದ್ದಾರೆ. ಹಾಸನದಲ್ಲಿ ಹಮ್ಮಿಕೊಂಡ ‘ನದಿಗಳನ್ನು ಕೊಲ್ಲಬೇಕೆ?’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಲಿನ್ಯದ ವಿರುದ್ದ ಹೊರಾಡುವುದು ಅನಿವಾರ್ಯ । ‘ನದಿಗಳನ್ನು ಕೊಲ್ಲಬೇಕೆ?’ ಸಂವಾದ

ಕನ್ನಡಪ್ರಭ ವಾರ್ತೆ ಹಾಸನ

ನದಿಗಳ ಮಾಲಿನ್ಯ ಕೇವಲ ನೀರಿನ ಕಲುಶತೆಯನ್ನುತೋರಿಸುತ್ತಿಲ್ಲ. ಬದಲಾಗಿ ಮನುಷ್ಯರ ಅಧೋಗತಿ ಹಾಗೂ ಮನುಷ್ಯರ ಮನಸ್ಸಿನ ಕಲ್ಮಶವನ್ನು ತೋರಿಸುತ್ತಿದೆ ಎಂದು ಪರಿಸರ ತಜ್ಞೆ ಹಾಗೂ ನದಿ ನೀರಿನ ಉಳಿವಿನ ಹೋರಾಟಗಾರ್ತಿ ನಿರ್ಮಲಾಗೌಡ ತಿಳಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ಪರಿಸರಕ್ಕಾಗಿ ನಾವು ಬಳಗ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರೆಡ್ ಕ್ರಾಸ್, ಭೂಸಿರಿ ವೇದಿಕೆ ಹಾಗೂ ಹಾಸನ ಜಿಲ್ಲಾ ಹಿರಿಯ ನಾಗರಿಕ ವೇದಿಕೆ ಜಂಟಿಯಾಗಿ ಹಮ್ಮಿಕೊಂಡ ‘ನದಿಗಳನ್ನು ಕೊಲ್ಲಬೇಕೆ?’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ನದಿಗಳು ಮಾಲಿನ್ಯವಾಗುತ್ತಿದೆ ಎಂಬ ಗಂಭೀರ ಅಂಶವನ್ನು ಸಭೆಯಲ್ಲಿ ನೆರೆದಿದ್ದವರಿಗೆ ಮನದಟ್ಟು ಮಾಡಲು ಯಶಸ್ವಿಯಾದರು. ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ನದಿಗಳ ಮಾಲಿನ್ಯತೆಯ ಚಿತ್ರಗಳನ್ನು ತೋರಿಸುತ್ತ ಅದಕ್ಕೆ ಕಾರಣಗಳನ್ನು ವಿವರಿಸಿತ್ತ ಹೋದ ನಿರ್ಮಲಗೌಡ, ಪ್ರಥಮವಾಗಿ ಹಾಸನ ಸಮೀಪದ ಹಾಲವಾಗಿಲಿನಲ್ಲಿ ಯಗಚಿ ನದಿಗೆ ಹಾಸನದ ಕೊಳೆಚೆ ನೀರು ಸೇರ್ಪಡೆಗೊಳ್ಳುತ್ತಿರುವುದನ್ನೇ ಉದಾಹರಣೆಯಾಗಿ ತೆಗೆದುಕೊಂಡು, ಹೇಗೆ ನದಿಗಳು ಮಲಿನವಾಗುತ್ತಿವೆ ಎನ್ನುವುದನ್ನು ತಿಳಿಸಿದರು.

ಇದೇ ರೀತಿ ಯಗಚಿ ನದಿಗೆ ಹಾಸನದ ತ್ಯಾಜ್ಯ ನೀರು ಹಾಗೂ ಕೈಗಾರಿಕಾ ತ್ಯಾಜ್ಯದ ನೀರು ಹರಿಸುವುದನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಯಗಚಿ ನದಿಯು ಬೆಂಗಳೂರಿನ ಕೆಂಗೇರಿ ಮೋರಿಯಂತಾಗುತ್ತದೆ ಎಂದು ಎಚ್ಚರಿಸಿದರು.

ಎತ್ತಿನಹೊಳೆ ಯೋಜನೆಯಿಂದಾಗಿಯೂ ನದಿಗಳ ಹಾಗೂ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಎದ್ದು ನಿಂತು ಮಾತನಾಡಿದಾಗ ಮಾತ್ರ ಸಮಸ್ಯೆಗೆ ಪರಿಹಾರದ ದಾರಿಯನ್ನು ಕಂಡುಕೊಳ್ಳಲು ಸಾಧ್ಯ. ನದಿ ನೀರು ಕಲುಷಿತಗೊಳ್ಳುತ್ತಿರುವುದಕ್ಕೆ ಮೂಲ ಕಾರಣಗಳನ್ನು ಹುಡುಕುವುದು, ಈ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸುವುದು, ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವಂತೆ ಮಾಡುವುದು, ಮಾಲಿನ್ಯದ ಕುರಿತು ಸರ್ಕಾರದ ಗಮನ ಸೆಳೆಯುವುದು ಹಾಗೂ ಒತ್ತಡ ಹೇರುವುದು, ನ್ಯಾಯಾಂಗದ ಮೊರೆ ಹೋಗುವುದು ಮತ್ತು ಮಾಲಿನ್ಯದ ವಿರುದ್ದ ಹೊರಾಡುವುದು, ಮೊದಲಾದ ಕಾರ್ಯಗಳಿಂದ ನದಿ ತ್ಯಾಜ್ಯ ತಡೆಗಟ್ಟಲು ಸಾಧ್ಯ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಮಾತನಾಡಿ, ಹಿಂದೆ ಮಣ್ಣು ಶುದ್ಧವಾಗಿತ್ತು. ಕಳೆದ ಐದು ದಶಕಗಳಲ್ಲಿ ಮಣ್ಣು ಸಂಪೂರ್ಣವಾಗಿ ಮಲಿನಗೊಂಡಿದೆ. ಅದರಿಂದ ನೀರು, ಗಾಳಿ ಎಲ್ಲದರ ಮೇಲೂ ಪರಿಣಾಮ ಬೀರಿದೆ. ಸದ್ಯ ದೊಡ್ಡ ಪ್ರಮಾಣದ ಪರಿಸರ ಹತ್ಯೆ ಹಾಗೂ ಸಣ್ಣ ಪ್ರಮಾಣದ ಅರಿವು ಮೂಡುತ್ತಿದ್ದು, ಸಹಜತೆ ಕಳೆದುಕೊಂಡಿದ್ದು ಮಕ್ಕಳಿಗೆ ಅದರ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿ ಗಂಭೀರವಾಗುತ್ತಿದೆ. ಹವಾಮಾನ ತುರ್ತು ಪರಿಸ್ಥಿತಿ ಬಂದಿದೆ ಎಂದು ವಿಜ್ಞಾನಿಗಳು ನೀಡುತ್ತಿದ್ದ ಎಚ್ಚರಿಕೆ ನಿಜವಾಗುತ್ತಿದೆ. ವಿಶ್ವದ ಹಲವೆಡೆ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಪರಿಸ್ಥಿತಿ ಇಷ್ಟೊಂದು ಹದಗೆಡಲು ಪರಿಸರದ ಮೇಲೆ ನಡೆದಿರುವ ಅವ್ಯಾಹತ ದೌರ್ಜನ್ಯವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಭಾರತೀಯ ರೆಡ್ ಕ್ರಾಸ್, ಸಭಾಪತಿ ಎಚ್.ಪಿ. ಮೋಹನ್, ಅನಂತಕುಮಾರ್, ನಿವೃತ್ತ ತಹಸೀಲ್ದಾರ್ ರುದ್ರಾಪ್ಪಾಜಿ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಸೇರಿ ವಿವಿಧ ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆ, ವಿದ್ಯಾರ್ಥಿಗಳು ಇದ್ದರು. ಹಸಿರು ಭೂಮಿ ಪ್ರತಿಷ್ಠಾನದ ಅಪ್ಪಾಜಿಗೌಡ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ.ಪೃಥ್ವಿ ಸ್ವಾಗತಿಸಿದರು.