ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರ್ವಧರ್ಮಗಳ ಜನರ ಸಂಕಷ್ಟಕ್ಕೆ ಶ್ರಮಿಸಿ ಮಾದರಿ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರು ನಾಡಪ್ರಭು ಎಂಬ ಕೀರ್ತಿಗೆ ನಿಜವಾದ ಭಾಷ್ಯ ಬರೆದವರು ಎಂದು ಪ್ರಾಂಶುಪಾಲ ಎಸ್.ದೊರೆಸ್ವಾಮಿ ತಿಳಿಸಿದರು.ಪಟ್ಟಣದ ಕೆಪಿಎಸ್ ಶಾಲೆ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯಲ್ಲಿ ಮಾತನಾಡಿ, ಕೆಂಪೇಗೌಡರು ಅದ್ಭುತ ಎಂಜಿನಿಯರ್. ವಿಜಯನಗರ ಅರಸ ಸಾಮಂತ, ಪಾಳೇಗಾರರಲ್ಲಿ ಅತ್ಯಂತ ಬಲಿಷ್ಟ, ಪ್ರಭಾವ ಶಾಲಿಗಳಾಗಿದ್ದರು ಎಂದರು.
ಇವರ ದೂರ ದೃಷ್ಟಿ ಫಲವಾಗಿ ಬೆಂಗಾಡಿನಂತಿದ್ದ ಪಟ್ಟಣವನ್ನು ಸುಸ್ಸಜ್ಜಿತ ನಗರವಾಗಿ ನಿರ್ಮಿಸಿದರು. ನೂರಾರು ಕೆರೆ, ಕಟ್ಟೆ ನಿರ್ಮಿಸಿ ಉದ್ಯಾನ ನಗರಿಯಾಗಿಸಿದರು. ಜನರ ರಕ್ಷಣೆಗಾಗಿ ಸುಭದ್ರವಾಗಿ ನಾಲ್ಕು ದಿಕ್ಕಿನಲ್ಲಿ ಕೋಟೆ ನಿರ್ಮಿಸಿದರು. ಸಾಕಷ್ಟು ಗುಡಿ, ಗೋಪುರ ನಿರ್ಮಿಸಿ ಬೆಂಗಳೂರು ನಗರಕ್ಕೆ ಶಕ್ತಿ ತುಂಬಿದ ಮಹಾನ್ ಪುರುಷರು ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, ಕೆಂಪೇಗೌಡರು ಎಲ್ಲ ಜನಾಂಗದ ಜಾತ್ಯತೀತ ಶಕ್ತಿ. ರಾಜಪ್ರ ಭುತ್ವದಲ್ಲಿ ಹಲವು ಅನಿಷ್ಟ ಪದ್ಧತಿ ವಿರೋಧಿಸಿದರು. ಜನಕಲ್ಯಾಣಕ್ಕಾಗಿ ವೃತ್ತಿ, ಕಸುಬು ಆಧಾರಿತವಾಗಿ ಹಲವು ಪೇಟೆ ನಿರ್ಮಿಸಿದರು ಎಂದರು.
ಅಂದು ನಿರ್ಮಿಸಿದ ಕೆರೆ, ರಾಜಕಾಲುವೆಗಳು ದುರಾಸೆಯಿಂದ ಮುಚ್ಚಿವೆ. ಇಂದು ಕೊಳವೆಬಾವಿ ಆರ್ಭಟಕ್ಕೆ ಮಳೆಗಾಲವೂ ಭೀಕರ ಬರಗಾಲವಾಗುವಂತಾಗಿದೆ. ರಾಜಕಾಲುವೆ ಮುಚ್ಚಿದ ಪರಿಣಾಮ ಜಲಪ್ರಳಯ ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಉಪನ್ಯಾಸಕ ಮಂಜುನಾಥ್ ಮಾತನಾಡಿ, ಬೆಂಗಳೂರು ಬೇಸಿಗೆ ಕಾಲದಲ್ಲಿಯೂ ತಂಪಾಗಿರಲು ಕೆಂಪೇಗೌಡರು ನಾಡಿನ ಜೊತೆಯಾಗಿ ಬೆಳೆಸಿದ ಮರಗಿಡಗಳು ಕಾರಣ. ಆದರೆ, ಇಂದು ನಗರೀಕರಣಕ್ಕೆ ಮರಗಳ ಹನನ, ಕೆರೆಕಟ್ಟೆ, ರಾಜಕಾಲುವೆ ಮುಚ್ಚಿಜೀವ ಸೆಲೆಯ ಮೂಲವೇ ಬರಿದಾಗುತ್ತಿರುವುದು ಜೀವ ಜಗತ್ತಿನ ಅಳಿವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೆಂಪೇಗೌಡರ ಸಾಕ್ಷಚಿತ್ರ ಪ್ರದರ್ಶನ ವಿದ್ಯಾರ್ಥಿಗಳ ಮನದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಉಳಿಯುವಂತೆ ಮಾಡಿತು.ಇದೇ ವೇಳೆ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ಈ ವೇಳೆ ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಎಸ್‌ಡಿಎಂಸಿ ಸದಸ್ಯ ಶೇಖರ್, ಉಪನ್ಯಾಸಕಎನ್. ರವೀಂದ್ರ, ಎ.ಎಂ.ಮಂಜುನಾಥ್, ಜಿ. ರಮೇಶ್, ಎ.ಎಂ. ನಾಗೇಶ್, ಎನ್.ಎ. ವಿನಾಯಕ, ವರಲಕ್ಷ್ಮಿ ಮತ್ತಿತರರಿದ್ದರು.