ಕೋಚಿಂಗ್ ಮೇಲೆ ಕ್ರಮಕ್ಕೆ ವಿಳಂಬ: ಕರವೇ ಎಚ್ಚರಿಕೆ

| Published : Jul 06 2025, 01:48 AM IST

ಸಾರಾಂಶ

ಶಾಲಾವಧಿಯಲ್ಲಿ ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ನೋಟಿಸ್ ಅವಧಿ ಮುಗಿದರೂ ಕ್ರಮ ಕೈಗೊಳ್ಳದ ಶಿಕ್ಷಣ ಅಧಿಕಾರಿಗಳ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕನ್ನಡಪ್ರಭ ವಾರ್ತೆ, ಔರಾದ್

ಶಾಲಾವಧಿಯಲ್ಲಿ ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ನೋಟಿಸ್ ಅವಧಿ ಮುಗಿದರೂ ಕ್ರಮ ಕೈಗೊಳ್ಳದ ಶಿಕ್ಷಣ ಅಧಿಕಾರಿಗಳ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಜೂ.30ರಂದು ಪಟ್ಟಣದಲ್ಲಿನ ಅನಧಿಕೃತ ಕೋಚಿಂಗ್ ಕೇಂದ್ರಗಳಿಗೆ ಬಿಇಓ ಪ್ರಕಾಶ ರಾಠೋಡ್ ಅವರು ಭೇಟಿ ನೀಡಿ ಮೂರು ದಿನಗಳಲ್ಲಿ ಕೇಂದ್ರಗಳು ಮುಚ್ಚಿ ಲಿಖಿತ ಉತ್ತರವನ್ನು ಕಚೇರಿಗೆ ಸಲ್ಲಿಸುವಂತೆ ಕೊನೆಯ ನೋಟಿಸ್ ಜಾರಿ ಮಾಡಿದರು. ಆದ್ರೆ ಶಿಕ್ಷಣ ಇಲಾಖೆಯ ನೋಟಿಸ್‌ಗೆ ಉತ್ತರಿಸದ ಕೋಚಿಂಗ್ ಮಾಲಿಕರು ಸೆಂಟರ್‌ಗೆ ಎರಡು ದಿನದ ರಜೆ ನೀಡಿ ಕೈ ತೊಳೆದುಕೊಂಡಿದ್ದಾರೆ.

ಕೋಚಿಂಗ್ ಮಾಲಿಕರು ನಾಮ ಕೇ ವಾಸ್ತೆ ಮಕ್ಕಳಿಗೆ 2 ದಿನದ ರಜೆ ನೀಡಿ ಇಲಾಖೆ ಅಧಿಕಾರಿಗಳ ದಾರಿ ತಪ್ಪಿಸುವ ತಂತ್ರ ಎದ್ದು ಕಾಣುತ್ತಿದ್ದು, ಈಗಾಗಲೇ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ವಾರದಲ್ಲಿ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.

ನೋಟಿಸ್ ಅವಧಿ ಮುಗಿದರೂ ಕೋಚಿಂಗ್‌ಗಳ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ.

-----

ಕೋಚಿಂಗ್‌ಗಳು ಮುಚ್ಚಿಸಿ ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಸುತ್ತೋಲೆ ಹೊರಡಿಸಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಾಳಿ ಮಾಡಿ ಕೊಚಿಂಗ್ ಅಕ್ರಮ ಬಯಲು ಮಾಡಿದ್ರು ಶಿಕ್ಷಣ ಇಲಾಖೆ ಸುಮ್ಮನಿರುವದು ಅವರು ಪರೋಕ್ಷವಾಗಿ ಕೊಚಿಂಗ್ ಗಳ ರಕ್ಷಣೆಗೆ ನಿಂತಿದ್ದಾರೆ ಎಂಬುದು ಸ್ಪಷ್ಟವಾಗ್ತಿದೆ.

- ಅನೀಲ ದೇವಕತ್ತೆ ಕರವೇ ತಾಲೂಕು ಅಧ್ಯಕ್ಷ

-------

ಶಾಲಾವಧಿಯಲ್ಲಿ ಕೋಚಿಂಗ್ ನಡೆದರೆ ಬಿಇಓ ಕಚೇರಿ ಎದುರು ಧರಣಿ ಮಾಡ್ತೀವಿ, ಮಕ್ಕಳ ಭವಿಷ್ಯ ಅತಂತ್ರಗೊಳಿಸಿ ಶೈಕ್ಷಣಿಕ ವ್ಯವಸ್ಥೆ ಬುಡಮೇಲು ಮಾಡಿದ ಎಲ್ಲ ಸೆಂಟರ್ ಗಳ ಮೇಲೆ ಕ್ರಮ ಯಾಕಿಲ್ಲ?

- ಬಸವರಾಜ ಚೌಂಕಪಳ್ಳೆ ಹೋರಾಟಗಾರ

-----

ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೊರಾಟ ಮಾಡ್ತೀವಿ. ಅಧಿಕಾರಿಗಳು ನೋಟಿಸ್ ನೀಡಿರುವುದನ್ನೇ ವಾರಗಟ್ಟಲೆ ಹೇಳಿ ಕೋಚಿಂಗ್‌ಗಳ ರಕ್ಷಣೆ ಮಾಡಲು ಹೊರಟಿರುವಂತೆ ಕಾಣುತ್ತದೆ ಎಂದು ಕಸಾಪ ಮುಖಂಡ ನವೀನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೀನ ರೆಡ್ಡಿ ಕಸಾಪ ಮುಖಂಡ

--------

ಶಿಕ್ಷಣ ಇಲಾಖೆ ಮತ್ತು ಕೋಚಿಂಗ್ ಸೆಂಟರ್ ಇಬ್ಬರದ್ದು ಒಳ ಒಪ್ಪಂದ ಇದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ದಾಳಿ ಮಾಡಿದ ಮೇಲೂ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳ್ತಾ ಇರೋದು ಅಧಿಕಾರಿಗಳ ವರ್ತನೆ ಅನುಮಾನದಿಂದ ಕೂಡಿದೆ.

ಸುಧಾಕರ ಕೊಳ್ಳುರ್ ಮುಖಂಡರು