ಕುಶಾಲನಗರ: ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ವಿಳಂಬ ನೀತಿ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದರೊಂದಿಗೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.

ಕುಶಾಲನಗರದಲ್ಲಿ ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಪಟ್ಟಣದ ಹೃದಯ ಭಾಗದಲ್ಲಿ ಕಾಮಗಾರಿ ಹೆಸರಿನಲ್ಲಿ ವಾಹನ ಸಂಚಾರಕ್ಕೆ ಮತ್ತು ನಾಗರಿಕರಿಗೆ ಅನಾನುಕೂಲ ಉಂಟು ಮಾಡಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶಶಿಧರ್, ಕಳೆದ 75 ದಿನಗಳಿಂದ ಪಟ್ಟಣದ ಹೃದಯ ಭಾಗದಲ್ಲಿ ಬೃಹತ್ ಕಂದಕಗಳನ್ನು ನಿರ್ಮಿಸಿ, ಹೆದ್ದಾರಿ ರಸ್ತೆಯಲ್ಲಿ ಮಣ್ಣು ಸುರಿದು ವಾಹನಗಳ ಸಂಚಾರಕ್ಕೆ ಮತ್ತು ಜನರ ದೈನಂದಿನ ಚಟುವಟಿಕೆಗಳಿಗೆ ತೊಡಕು ಉಂಟಾಗುತ್ತಿರುವುದನ್ನು ತಾನು ಗಮನಿಸಿದ್ದೇನೆ. ಕೇವಲ 15 ಮೀಟರ್ ಉದ್ದದ ಚರಂಡಿ ನಿರ್ಮಾಣ ಕಾಮಗಾರಿ ಹೆಸರಿನಲ್ಲಿ ಸ್ಥಳದಲ್ಲಿ ಬೃಹತ್ ಜೆಸಿಬಿ ಹಿಟಾಚಿ ಯಂತ್ರಗಳನ್ನು ನಿಲುಗಡೆಗೊಳಿಸಿ ಸ್ಥಳದಲ್ಲಿ ಸಮಸ್ಯೆ ಸೃಷ್ಟಿಸಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕ್ಷೇತ್ರ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ತಿಳಿಸಿದ ಅವರು ಸಂಬಂಧಿಸಿದ ಒಳಚರಂಡಿ ಮಂಡಳಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಾಮಗಾರಿಯಲ್ಲಿ ವಿಳಂಬ ಧೋರಣೆ ತಾಳುವ ಮೂಲಕ ಕಾಮಗಾರಿ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಾ ಬಂದಿರುವ ಅಧಿಕಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಧರ್ ತಿಳಿಸಿದ್ದಾರೆ.