ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ರುಚಿಕಟ್ಟಾದ ಅಡುಗೆ ತಯಾರಿಸುವುದು ಸಹ ಒಂದು ಕಲೆ. ಶಾಲೆ ಮತ್ತು ಮನೆಗಳಲ್ಲಿ ರುಚಿಶುಚಿಯಾದ ಅಡುಗೆ ತಯಾರಿಕೆಯಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಶನಿವಾರ ನಗರದ ಶ್ರೀ ವೀರಪುಲಿಕೇಶಿ ಸಂಸ್ಥೆಯ ಬಸವಭವನದಲ್ಲಿ ತಾಪಂ, ಪ್ರಧಾನಮಂತ್ರಿ ಪೋಷಣ್ ಶಕ್ತಿ ಅಭಿಯಾನ ಹಾಗೂ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಮತ್ತು ತಾಲೂಕು ಮಟ್ಟದ ಅಡುಗೆ ತಯಾರಿಕಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮನೆ ಸೇರಿದಂತೆ ಶಾಲೆಗಳಲ್ಲಿ ರುಚಿ-ಶುಚಿಯಾದ ಅಡುಗೆ ತಯಾರಿಸುವುದು ಮಹತ್ವದ್ದಾಗಿದೆ. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ತೋಟಗೇರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ. ಹದ್ಲಿ, ಎಸ್.ಎಸ್. ಯಲಿಗಾರ, ಸಿದ್ದಮ್ಮ ಕಲ್ಗುಡಿ, ಕಸ್ತೂರಿಬಾಯಿ ಗುಣೋಜಿ, ಸುಮಂಗಲಾ ಪಾಗದ, ಮುತ್ತಣ್ಣ ಬಾಗಲೆ, ಶಿಕ್ಷಕ ಉಜ್ವಲ ಬಸರಿ, ಹನುಮಂತ ಜೋಗಿನ ಸೇರಿದಂತೆ ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕು ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಂ.ಬಿ. ದೊಡ್ಡಪ್ಪನ್ನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಪ್ರಕಾಶ ಇಟಗಿ ನಿರೂಪಿಸಿ, ವಂದಿಸಿದರು. ಅಡುಗೆ ಸ್ಪರ್ಧೆಯಲ್ಲಿ ಮಾಡಿದ ಅಡುಗೆ ರುಚಿ ಸವಿದ ಶಾಸಕರು, ಸಂತಸ ವ್ಯಕ್ತಪಡಿಸಿದರು. ತಾಲೂಕು ಶಿಕ್ಷಣ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಶಾಲೆಯ ಅಡುಗೆ ಸಿಬ್ಬಂದಿ ಭಾಗವಹಿಸಿದ್ದರು.