ಸಭೆಯಲ್ಲಿ ಸದಸ್ಯರು ಮಾತನಾಡಿ, ಪಡಿತರ ಅಂಗಡಿಗಳು ಹಣ ಪಡೆಯುವುದು ಕಡಿಮೆ, ಅಕ್ಕಿ, ರಾಗಿ ವಿತರಣೆ ಸೇರಿದಂತೆ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅಗೌರವ ತರುವ ನಿಟ್ಟಿನಲ್ಲಿ ದೂರುಗಳು ಬಂದಿವೆ. ಕೂಡಲೇ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ, ಯಾವುದೇ ಕಾರಣದಿಂದಲೂ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಂ.ಮುನಿಯಪ್ಪ ಸೂಚಿಸಿದರು.ನಗರದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಬಂದು ಎರಡು ವರ್ಷಗಳಾಗಿದೆ, ಅಂದಿನಿಂದಲೂ ಯೋಜನೆಗಳು ಜಾರಿಯಾಗಿದೆ, ಇನ್ನೂ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದರೆ ಅಧಿಕಾರಿಗಳು ಸೇರಿದಂತೆ ಸಮಿತಿ ಅಧ್ಯಕ್ಷರು, ಸದಸ್ಯರಿಗೆ ಅವಮಾನವಾದಂತೆ. ಕೂಡಲೇ ಫಲಾನುಭವಿಗಳಿಗೆ ಉಳಿದ ಅವಧಿಯಲ್ಲಿ ಗ್ಯಾರಂಟಿ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸುತ್ತಿವೆ. ಬೇರೆ ರಾಜ್ಯಗಳಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಇದೇ ಮಾದರಿಯಲ್ಲಿ ಸಹ ಬೇರೆ ರಾಜ್ಯಗಳಲ್ಲಿ ಜಾರಿ ಮಾಡಲು ಮುಂದಾಗಿವೆ, ಯುವನಿಧಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಮಾಹಿತಿ ನೀಡಲು ಶಿಬಿರಗಳನ್ನು ಆಯೋಜಿಸಬೇಕು, ಪ್ರತಿಯೊಂದು ಪಡಿತರ ವಿತರಣಾ ಕೇಂದ್ರದಲ್ಲಿ ಕಡ್ಡಾಯವಾಗಿ ಸೂಚನಾ ಫಲಕ ಪ್ರದರ್ಶನ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸದಸ್ಯರು ಮಾತನಾಡಿ, ಪಡಿತರ ಅಂಗಡಿಗಳು ಹಣ ಪಡೆಯುವುದು ಕಡಿಮೆ, ಅಕ್ಕಿ, ರಾಗಿ ವಿತರಣೆ ಸೇರಿದಂತೆ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅಗೌರವ ತರುವ ನಿಟ್ಟಿನಲ್ಲಿ ದೂರುಗಳು ಬಂದಿವೆ. ಕೂಡಲೇ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಿದರು.ಕೋಲಾರ ತಾಲೂಕಿನಲ್ಲಿ ಯೋಜನೆ ಪ್ರಾರಂಭದಿಂದ ಯುವನಿಧಿಯಲ್ಲಿ ಸುಮಾರು ೧೨೨೭ ಫಲಾನುಭವಿ ಗಳಿಗೆ ೫.೧೬ ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ, ಗೃಹಲಕ್ಷ್ಮೀ ಯೋಜನೆಯಲ್ಲಿ ೮೦,೨೩೪ ಫಲಾನುಭವಿಗಳಿಗೆ ೩೪೦ ಕೋಟಿ ರು., ಗೃಹ ಜ್ಯೋತಿಯಲ್ಲಿ ೧.೯ ಲಕ್ಷ ಫಲಾನುಭವಿಗಳಿಗೆ ೮೩ ಕೋಟಿ ರು., ಶಕ್ತಿ ಯೋಜನೆಯಲ್ಲಿ ತಿಂಗಳಿಗೆ ೧೩ ಲಕ್ಷ ಪ್ರಯಾಣಿಕರು ಸೌಲಭ್ಯ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಇಒ ಮಂಜುನಾಥ್, ಸಹಾಯಕ ನಿರ್ದೇಶಕ ಮಂಜುನಾಥ್ ಪ್ರಸಾದ್, ಸಮಿತಿ ಸದಸ್ಯರಾದ ನಂದಬಳ್ಳಿ ವಿಜಯಕುಮಾರ್, ನವೀನ್, ಭರತ್, ವಿನೋದ್, ಅಯೂಬ್ ಖಾನ್ ಇದ್ದರು.