ದೇವಸ್ಥಾನ ಆಸ್ತಿ ಕಬಳಿಕೆಗೆ ಅವಕಾಶ ಮಾಡಿಕೊಟ್ಟ ಡಿಸಿ ವಿರುದ್ಧ ಕ್ರಮಕ್ಕೆ ಆಗ್ರಹ

| Published : Jul 07 2024, 01:16 AM IST

ಸಾರಾಂಶ

ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ಮಾರುತಿ ಮಂದಿರದ ಟ್ರಸ್ಟ್‌ ಸೇರಿದ್ದ ಸುಮಾರು ₹200 ಕೋಟಿ ಮೌಲ್ಯದ ಜಮೀನನ್ನು ಕಬಳಿಸಲು ಅವಕಾಶ ಮಾಡಿಕೊಟ್ಟ ಅಂದಿನ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ ಕಠಿಣ ಕ್ರಮ ಜರುಗಿಸಬೇಕು. ಜತೆಗೆ ದೇವಸ್ಥಾನದ ಆಸ್ತಿಗೆ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ಮಾರುತಿ ಮಂದಿರದ ಟ್ರಸ್ಟ್‌ ಸೇರಿದ್ದ ಸುಮಾರು ₹200 ಕೋಟಿ ಮೌಲ್ಯದ ಜಮೀನನ್ನು ಕಬಳಿಸಲು ಅವಕಾಶ ಮಾಡಿಕೊಟ್ಟ ಅಂದಿನ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ ಕಠಿಣ ಕ್ರಮ ಜರುಗಿಸಬೇಕು. ಜತೆಗೆ ದೇವಸ್ಥಾನದ ಆಸ್ತಿಗೆ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಗಾ ಗ್ರಾಮದ ಮಾರುತಿ ದೇವರ ದೇವಸ್ಥಾನದ ಟ್ರಸ್ಟ್‌ಗೆ ಸೇರಿದ್ದ ಹೊನ್ನಿಹಾಳ ಗ್ರಾಮದ ರಿ.ಸ.ನಂ. 43 ರಲ್ಲಿ 92 ಎಕರೆ 39 ಗುಂಟೆ ಜಮೀನಿನನ್ನು 2016-17ರಲ್ಲಿ ಉಚ್ಚನಾಯ್ಯಾಲಯದಲ್ಲಿ ಪ್ರಕರಣ ಬಾಕಿ ಇದ್ದ ಸಮಯದಲ್ಲಿ ಅಂದಿನ ಜಿಲ್ಲಾಧಿಕಾರಿ ಜಯರಾಮ್ ಅವರು ದೇವಸ್ಥಾನದ ಜಮೀನನನ್ನು ಭೂ ಪರಿವರ್ತನೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯತಿಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯುವಂತೆ ಸೂಚನೆ ನೀಡಿದ್ದರು. ನಿರಪೇಕ್ಷಣಾ ಪತ್ರ ನೀಡದ ಆರು ಜನ ಪಿಡಿಒಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದರು ದೂರಿದರು.

ಅನ್ಯ ಕೋಮಿನ ರಿಯಲ್ ಎಸ್ಟೇಟ್‌ ಉದ್ಯಮಿಗೆ ದೇವಸ್ಥಾನದ ಆಸ್ತಿಯನ್ನು ಕಬಳಿಸಲು ಬೆಳಗಾವಿಯ ಮಾಜಿ ಜಿಲ್ಲಾಧಿಕಾರಿ ಸದ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿದ್ದರುವ ಜಯರಾಮ ಅವರು ಅವಕಾಶ ಕಲ್ಪಿಸಿದ್ದು, ಸಿಎಂ ಪಕ್ಕದಲ್ಲೇ ಇರುವ ಆ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಅಕ್ರಮವಾಗಿ ನಾಸೀರ ಭಾಗವಾನ ಮತ್ತು ಇತರರ ಹೆಸರಲ್ಲಿರುವ ಕಂದಾಯ ಇಲಾಖೆಯಲ್ಲಿನ ದಾಖಲಾತಿಗಳನ್ನು ರದ್ದುಪಡಿಸಿ ಟ್ರಸ್ಟ್‌ ಹೆಸರು ನಮೋದಿಸಬೇಕು. ಅಧಿಕಾರ ದುರ್ಬಳಕೆ ಮಾಡಿ ಬಿಲ್ಡರ್‌ಗಳಿಗೆ ವರ್ಗಾವಣೆ ಮಾಡಿದ ಅಂದಿನ ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮುಜರಾಯಿ ಇಲಾಖೆಯ ಸೇರಿದ ಜಾಗವನ್ನು ಅನ್ಯಧರ್ಮಿಯರ ಹೆಸರಿಗೆ ಮಾಡದಂತೆ ನಿಯಮ ಇದ್ದರೂ ಪರಬಾರೆ ಮಾಡರುವುದನ್ನು ರದ್ದುಪಡಿಸಬೇಕು. 92 ಎಕರೆ 39 ಗುಂಟೆ ಜಮೀನು ರಸ್ತೆ ಹಾಗೂ ವಿಮಾನ ನಿಲ್ದಾನ ಪಕ್ಕದಲ್ಲಿರುವುದರಿಂದ ಭೂ ಕಬಳಿಕೆದಾರರು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಆದ್ದರಿಂದ ಜಮೀನಿಗೆ ಸಂಪೂರ್ಣ ತಂತಿ ಬೇಲಿ ಹಾಕಿ ಫಲಕ ಅಳವಡಿಸುವುದರ ಜತೆಗೆ ಮೋದಗಾ ಗ್ರಾಮಸ್ಥರಿಗೆ ಮುಜರಾಯಿ ಸಚಿವರ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮೋದಗಾ ಗ್ರಾಮಸ್ಥರು ಟ್ರಸ್ಟ್‌ನ ಜಮೀನು ಉಳಿವಿಹಾಗಿ ಕಳೆದ 60 ವರ್ಷಗಳ ದಾಖಲೆ ಕೂಡ ಗ್ರಾಮಸ್ಥರ ಬಳಿ ಇವೆ. ಮುಜರಾಯಿ ಇಲಾಖೆ ಕೂಡ ತನ್ನ ಸುಪರ್ದಿಗೆ ಸೇರಿದ ಆಸ್ತಿ ಇದಾಗಿದೆಂದು ಹೇಳಿದೆ. ಆದರೂ ಕೂಡ ರಿಯಲ್ ಎಸ್ಟೇಟ್ ಉದ್ಯಮಿಗೆ ಅನುಕೂಲ ಮಾಡಿಕೊಡಲು ಅಧಿಕಾರದ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅನೇಕ ಅಧೀನ ಅಧಿಕಾರಿಗಳನ್ನು ವರ್ಗಾವಣೆ ಕೂಡ ಮಾಡಲಾಗಿದೆ. ಇಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ನಡೆಯುವ ಘಟನೆಗಳಿಗೆ ಸರ್ಕಾರ ಮತ್ತು ಅಧಿಕಾರಿಗಳೆ ಜವಾಬ್ದಾರಿಯಾಗಲಿದೆ ಎಂದರು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಕ್ಯಾರಗುಡ ಅಜೀವಕರ ದ್ಯಾನ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ರವಿ ಕೋಕಿತಕರ, ಓಮಣ್ಣ ಅಷ್ಟೇಕರ, ಬಸವಣ್ಣ ಮುಗಳಿ, ಕಲ್ಲಪ್ಪ ಕಮ್ಮಾರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ಧರು.