ಸಾರಾಂಶ
ಕಳಪೆ ಬೀಜ ಪೂರೈಕೆ ಮಾಡಿದ ಕೃಷಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಪರೀತ ಮಂಜಿನ ವಾತಾವರಣ ಹಾಗೂ ಕಳಪೆ ಬೀಜಗಳಿಂದ ತೀವ್ರ ನಷ್ಟ ಅನುಭವಿಸುತ್ತಿರುವ ವಿಜಯಪುರದ ತೊಗರಿ ಬೆಳೆದಿರುವ ರೈತರ ನಷ್ಟ ಸರಿದೂಗಿಸಲು ಬೆಂಬಲ ಬೆಲೆಯನ್ನು ನೀಡಬೇಕು ಹಾಗೂ ಕಳಪೆ ಬೀಜ ಪೂರೈಕೆ ಮಾಡಿದ ಕೃಷಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.ರಾಜ್ಯ ಸರ್ಕಾರ ಕಳಪೆ ಮಟ್ಟದ ತೊಗರಿ ಬೀಜ ವಿತರಣೆ ಮಾಡಿರುವುದರಿಂದ ತೊಗರಿ ಗಿಡದಲ್ಲಿ ಕಾಯಿಗಳೇ ಬಿಡದೆ, ನಮ್ಮ ವಿಜಯಪುರ ಭಾಗದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ತೊಗರಿ ಬೀಜ ವಿತರಣೆ ಮಾಡುವ ಮುನ್ನ ಅದರ ಗುಣಮಟ್ಟ ಹಾಗೂ ಕಂಪನಿಯ ಪೂರ್ವಾಪರವನ್ನು ಪರಿಶೀಲಿಸಿ ನೀಡಬೇಕಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳು, ಕೆಲ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಳಪೆ ಬೀಜ ವಿತರಿಸಿರುತ್ತಾರೆ.
ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸಿರುವ ಜಿಆರ್‌ಜಿ-152 ಹಾಗೂ 811 ತೊಗರಿ ಬೀಜಗಳು ಕಳಪೆ ಮಟ್ಟದಾಗಿದ್ದು, ಇದರಲ್ಲಿ ಕಾಯಿಗಳೇ ಹುಟ್ಟುತ್ತಿಲ್ಲ. ಕಳಪೆ ಬೀಜದ ಕಾರಣ ಒಂದಾದರೆ, ಈ ಬಾರಿ ವಿಪರೀತ ಮಂಜಿನ ವಾತಾವರಣದಿಂದಾಗಿ ತೊಗರಿಯ ಫಲಗಳು ಉದುರಿ ಹೋಗಿದೆ. ನಮ್ಮ ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 4.69 ಲಕ್ಷ ಹೆಕ್ಟೇರ್ ಗಳಲ್ಲಿ ತೊಗರಿಯನ್ನು ಬೆಳೆಯಲಾಗಿದೆ. ಪ್ರತಿ ಗೊನೆಯಲ್ಲಿ 40 ರಿಂದ 50 ಕಾಯಿ ಇರಬೇಕಾದದ್ದು, ಕೇವಲ 2-3 ಕಾಯಿಗಳು ಮಾತ್ರ ಬಿಟ್ಟಿವೆ. ತೊಗರಿ ಬೆಳೆ ಪ್ರತಿ ಎಕರೆಗೆ 10 ರಿಂದ 13 ಚೀಲ ಇಳುವರಿ ಬರೋ ಜಾಗದಲ್ಲಿ ಕೇವಲ 1 ರಿಂದ 2 ಚೀಲ ಇಳುವರಿ ಬರುತ್ತಿರುವುದನ್ನು ನಾನು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ. ಈ ಬಾರಿ ಸಮೃದ್ಧವಾಗಿ ಮಳೆಯಾದ ಕಾರಣ ತೊಗರಿ ರೈತರು ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಕೃಷಿ ಇಲಾಖೆಯ ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರದಿಂದ ರೈತ ಕಣ್ಣೀರಿಡುವ ಪರಿಸ್ಥಿತಿ ಉದ್ಭವಿಸಿದೆ. ತೊಗರಿಯ ಕಣಜ ಎಂದೇ ಪ್ರಖ್ಯಾತಿ ಗಳಿಸಿರುವ ವಿಜಯಪುರದಲ್ಲಿ 7-8 ಅಡಿ ಎತ್ತರಕ್ಕೆ ಹುಲುಸಾಗಿ ಬೆಳೆದಿದ್ದರೂ, ಕಾಯಿಯೇ ಬಿಟ್ಟಿಲ್ಲ. ಎಕರೆಗೆ ₹10-12 ಸಾವಿರ ಖರ್ಚು ಮಾಡಿರುವ ರೈತನಿಗೆ ಒಂದು ಕ್ವಿಂಟಾಲ್ ತೊಗರಿ ಕಾಳು ಸಹ ಸಿಗುತ್ತಿಲ್ಲ.ತಾವು ಕೂಡಲೇ ರೈತರಿಗೆ ಆಗಿರುವ ನಷ್ಟವನ್ನು ಸರಿದೂಗಿಸಲು ತೊಗರಿ ಬೆಳೆಗೆ ಬೆಂಬಲ ಬೆಳೆಯನ್ನು ನಿಗದಿ ಪಡಿಸಲು ವಿಜಯಪುರದ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು ಹಾಗೂ ಕಳಪೆ ಮಟ್ಟದ ಬೀಜಗಳನ್ನು ನೀಡಿದ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕಂಪನಿಯ ವಿರುದ್ಧ ಕಾನೂನು ರೀತ್ಯ ಕ್ರಮವನ್ನು ಕೂಡಲೇ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.