ಸಾರಾಂಶ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಆಂಧ್ರಪ್ರದೇಶ ಮೂಲದ ಅಧಿಕಾರಿಗಳೇ ಇದ್ದಾರೆ. ಅವರಿಗೆ ಕನ್ನಡ ನಾಡು, ನುಡಿ, ಜಲದ ಬಗ್ಗೆ ಅರಿವಿಲ್ಲ. ಅವರು ಆಂಧ್ರದ ಸಿಎಂ ಅಣತಿಯಂತೆ ನಡೆದುಕೊಳ್ಳುತ್ತಾರೆ. ಎಲ್ಲ ಅಧಿಕಾರಿಗಳನ್ನು ಕೂಡಲೇ ತೆರವುಗೊಳಿಸಿ ರಾಜ್ಯದಿಂದ ಜಲಾಶಯದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳನ್ನು ನೇಮಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ಜಲ ಸಂಪನ್ಮೂಲ ಸಚಿವರೇ ಹೊಣೆ. ಸಂಸದ ಈ. ತುಕಾರಾಂ ಅವರೇ ಎಂಟು ತಿಂಗಳಿಂದ ಮುಖ್ಯ ಎಂಜಿನಿಯರ್ ಇಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದಿದ್ದಾರೆ. ಎಲ್ಲ ಸರಿ ಇದ್ದಿದ್ದರೆ ಎರಡೂ ಬೆಳೆಗೆ ಸಂಪೂರ್ಣ ನೀರು ಸಿಗುತ್ತಿತ್ತು. ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂದು ದೂರಿದರು.ಕೆಆರ್‌ಎಸ್ ಬಗ್ಗೆ ಎಲ್ಲರೂ ಕಾಳಜಿ ವಹಿಸುತ್ತಾರೆ. ಆದರೆ, ಉತ್ತರ ಕರ್ನಾಟಕದ ಜಲಾಶಯಗಳು, ಇಲ್ಲಿನ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರೈತರ ಕಿರುಗಾವಲು, ಕಾಲುವೆ ದುರಸ್ತಿಗೆ ಹಣ ವ್ಯಯಿಸಬೇಕು. ಮನರಂಜನೆಗೆ ಹಣ ಮೀಸಲಿಡುವುದನ್ನು ಜಲಸಂಪನ್ಮೂಲ ಸಚಿವರು ಕೈ ಬಿಡಬೇಕು ಎಂದರು.
ರಾಜ್ಯ ಸರ್ಕಾರಕ್ಕೆ ಗೇಟ್‌ನ ಬಗ್ಗೆ ಮೊದಲೇ ಮಾಹಿತಿ ಇದ್ದಂತಿದೆ. ಹಾಗಾಗಿ ಬಾಗಿನ ಅರ್ಪಿಸುವ ದಿನಾಂಕ ಮುಂದೂಡಿದ್ದರು. ಇದರ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು. ಸುಖಾಸುಮ್ಮನೆ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವಂತಿಲ್ಲ ಎಂದು ಕಿಡಿಕಾರಿದರು.ರೈತರು ಎರಡು ಬೆಳೆ ಬೆಳೆಯಲು ರೈತರು ಸಿದ್ಧವಾಗಿದ್ದರು. ಈಗ ಇದರ ನಷ್ಟ ಯಾರು ಭರಿಸಬೇಕು? ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಾಗಿನ ಅರ್ಪಿಸಲು ನಮಗೆ ಅವಕಾಶ ಕೊಡದಿದ್ದರೆ ಹೇಗೆ? ನಾವೇನು ಆಂಧ್ರದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಟಿಬಿ ಬೋರ್ಡ್ ಕಾರ್ಯದರ್ಶಿ ಅಮಾನತಿಗೆ ಡಿಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಕೂಡಲೇ ಕ್ರಮ ಕೈಗೊಂಡಿದ್ದರೆ ಎಲ್ಲ ಅಧಿಕಾರಿಗಳಿಗೆ ಬಿಸಿ ಮುಟ್ಟುತ್ತಿತ್ತು. ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ನಷ್ಟ ಆಗುತ್ತಿರಲಿಲ್ಲ. ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ರೈತರಿಗೋಸ್ಕರ ನಾವೇ ಹೋರಾಡಬೇಕು. ಬಿಜೆಪಿಯವರು ರೈತರಿಗಾಗಿ ಯಾವ ಪಾದಯಾತ್ರೆ ಮಾಡಿದ್ದಾರೆ? ಇಡೀ ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ ಬಂದು ದುರಸ್ತಿ ಕೆಲಸ ಪೂರ್ಣಗೊಳಿಸಿ ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟೆಲ್ಲ ನಡೆದರೂ ಇತ್ತ ತಿರುಗಿ ನೋಡಿಲ್ಲ. ನಮಗೆ ಈ ಭಾಗದವರನ್ನೇ ಉಸ್ತುವಾರಿಯನ್ನಾಗಿಸಬೇಕು. ಅವರು ಬೆಂಗಳೂರಿನಲ್ಲೇ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ, ಮುಖಂಡರಾದ ವೆಂಕಪ್ಪ, ಬೀನಾ ರೂಪಲತಾ, ರಾಧಾ ರಾಮಪ್ಪ, ರಾಜ್ಯ ಸಂಚಾಲಕ ವಿ.ಎಸ್. ಕಂಟೆಪ್ಪಗೌಡ, ವೆಂಕಟೇಶ್, ವೆಂಕೋಬ, ಕಮಲಾಪುರ ಬಸಯ್ಯ, ರೂಪಾ, ರೇಣುಕಾ, ಸೌಭಾಗ್ಯ, ಪಾರ್ವತಿ, ಲಲಿತಾ ಇದ್ದರು.