ಕನ್ನಡಪ್ರಭ ವಾರ್ತೆ ಬೆಂಗಳೂರು
ಪುನರ್ವಿತರಣಾ ಸಂಪನ್ಮೂಲ ವರ್ಗಾವಣೆ (ಆರ್‌ಆರ್‌ಟಿ) ಪ್ರಕರಣದಲ್ಲಿ ದೂರುದಾರನ ಪರ ಆದೇಶ ನೀಡಲು 30 ಲಕ್ಷ ರು. ಲಂಚ ಸ್ವೀಕಾರದ ಆರೋಪದಡಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ನಗರದ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬೆಂಗಳೂರು ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಬೆಂಗಳೂರು ಉತ್ತರದ ವಿಶೇಷ ಸಹಾಯಕ ಆಯುಕ್ತ ನಾಗ ಪ್ರಶಾಂತ್ ಮತ್ತು ಕೆಐಡಿಬಿ ಹೊರಗುತ್ತಿಗೆ ಚಾಲಕ ಕುಮಾರ್ ಬಂಧಿತರು. ಯಲಹಂಕದ ಅಟ್ಟೂರು ನಿವಾಸಿ ರವಿಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು ಉತ್ತರ ಎಸಿ ಕಚೇರಿಯಲ್ಲಿ ಆರ್‌ಆರ್‌ಟಿ ಪ್ರಕರಣ ಸಂಬಂಧ ವಿಶೇಷ ಎಸಿ ನಾಗಪ್ರಶಾಂತ್ ಅವರು ದೂರುದಾರ ರವಿಕುಮಾರ್ ಪರ ಆದೇಶ ನೀಡಲು 30 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ರವಿಕುಮಾರ್ ನಗರದ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ವಿಶೇಷ ಎಸಿ ನಾಗಪ್ರಶಾಂತ್ ಸೂಚನೆ ಮೇರೆಗೆ ಇತ್ತೀಚೆಗೆ ಕಾರು ಚಾಲಕ ಕುಮಾರ್ ದೂರುದಾರ ರವಿಕುಮಾರ್ ಅವರಿಂದ ಮೊದಲ ಕಂತಿನಲ್ಲಿ 15 ಲಕ್ಷ ರು.ಲಂಚ ಸ್ವೀಕರಿಸಿದ್ದರು. ಬುಧವಾರ ದೂರುದಾರನಿಂದ ಎರಡನೇ ಕಂತಿನ ಬಾಕಿ 15 ಲಕ್ಷ ರು. ಲಂಚ ಸ್ವೀಕರಿಸುವಾಗ ಕಾರು ಚಾಲಕ ಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಳಿಕ ಲೋಕಾಯುಕ್ತ ಪೊಲೀಸರು ವಿಶೇಷ ಎಸಿ ನಾಗಪ್ರಶಾಂತ್ ಅವರನ್ನು ಬಂಧಿಸಿದ್ದಾರೆ. ಬಂಧಿತ ಈ ಇಬ್ಬರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
