ಸಕ್ಕರೆ ಸಚಿವರ ನೇತೃತ್ವದ ಅಧ್ಯಯನ ಸಮಿತಿಗೆ ಒತ್ತಾಯ

| Published : Nov 12 2025, 02:15 AM IST

ಸಕ್ಕರೆ ಸಚಿವರ ನೇತೃತ್ವದ ಅಧ್ಯಯನ ಸಮಿತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಬೆಳೆಗಾರರ ಬೆಲೆ ವಿಚಾರವಾಗಿ ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ನಿಗಾ ಇಡುವ ಜೊತೆಗೆ ಸಕ್ಕರೆ ಸಚಿವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ, ನಿಗಾ ವಹಿಸುವಂತೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಕಾರಿಣಿ ಒತ್ತಾಯಿಸಿದೆ.

- ರೈತರಿಗೆ ಅನ್ಯಾಯ ಆಗದಿರಲಿ: ರೈತ ಸಂಘ ರಾಜ್ಯ ಕಾರ್ಯಕಾರಣಿ ಸಭೆ ಆಗ್ರಹ - - -

- ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆಯೇ ಅವಲಂಬಿತವಾಗಿದೆ ಎಂಬ ವಿಚಾರಕ್ಕೆ ಸಭೆಯಲ್ಲಿ ತೀವ್ರ ಬೇಸರ

- ವಿಜಯಪುರ, ಕಲಬುರಗಿ, ಬಾಗಲಕೋಟೆ, ಕೊಪ್ಪಳ ಭಾಗದಲ್ಲೂ ಕಬ್ಬು ಬೆಳೆಗಾರರಿಗೆ ಅತಿ ಕಡಿಮೆ ದರ ತೋರಿಸಿ, ರೈತರಿಗೆ ಮೋಸ

- ಬೆಳೆ ನಷ್ಟದ ವಾಸ್ತವ ಅರಿಯಲು ಯಾವುದೇ ಹಳ್ಳಿ, ರೈತರ ಜಮೀನುಗಳಿಗೆ ಸರ್ಕಾರದ ಸಚಿವರು, ಉನ್ನತಮಟ್ಟದ ಅಧಿಕಾರಿಗಳಾಗಲೀ ಭೇಟಿ ನೀಡಿಲ್ಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಬ್ಬು ಬೆಳೆಗಾರರ ಬೆಲೆ ವಿಚಾರವಾಗಿ ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ನಿಗಾ ಇಡುವ ಜೊತೆಗೆ ಸಕ್ಕರೆ ಸಚಿವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ, ನಿಗಾ ವಹಿಸುವಂತೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಕಾರಿಣಿ ಒತ್ತಾಯಿಸಿದೆ.

ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರ ಬೆಲೆ ಸಮಸ್ಯೆ ಪರಿಹರಿಸಲು ಕಾರ್ಖಾನೆಗಳಿಂದ ₹3250, ಸರ್ಕಾರದಿಂದ ₹50 ಸೇರಿಸಿ, ಬೆಲೆ ಕೊಡಲು ನಿರ್ಧರಿಸಿದ್ದು, ಈ ಮೂಲಕ ಸರ್ಕಾರವು ಕಾರ್ಖಾನೆಗಳ ಮೇಲೆಯೇ ಅವಲಂಬಿತವಾಗಿದೆ ಎಂದು ಸಭೆ ತೀವ್ರ ಬೇಸರ ವ್ಯಕ್ತಪಡಿಸಿತು.

ಸಂಘದ ಮುಖಂಡ ವಾಸುದೇವ ಮೇಟಿ ಮಾತನಾಡಿ, ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಕಲಬುರಗಿ, ಬಾಗಲಕೋಟೆ, ಕೊಪ್ಪಳ ಭಾಗದಲ್ಲೂ ಕಬ್ಬು ಬೆಳೆಗಾರರಿಗೆ ಅತಿ ಕಡಿಮೆ ದರ ತೋರಿಸಿ, ರೈತರಿಗೆ ಮೋಸ ಮಾಡಲಾಗುತ್ತಿದೆ. ಇದರ ಮೇಲೂ ಸರ್ಕಾರ ನಿಗಾ ವಹಿಸಬೇಕು. ರಾಜ್ಯಾದ್ಯಂತ ಮಳೆಯಿಂದ ರೈತರಿಗೆ ಬಹಳಷ್ಟು ಹಾನಿಯಾಗಿದೆ. ಸರ್ಕಾರ ಹೇಳುವ ಪ್ರಕಾರ 11 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ ಎಂದರು.

ವಾಸ್ತವದಲ್ಲಿ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಜಮೀನಿನಲ್ಲಿ ಬೆಳೆನಾಶದಿಂದ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ರೈತರ ಪರಿಹಾರಕ್ಕಾಗಿ ₹285 ಕೋಟಿ ಬಿಡುಗಡೆ ಮಾಡಿದೆ. ಆದರೆ, ಇಷ್ಟು ಕಡಿಮೆ ಪರಿಹಾರದ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಬೆಳೆ ನಷ್ಟದ ವಾಸ್ತವ ಅರಿಯಲು ಯಾವುದೇ ಹಳ್ಳಿ, ರೈತರ ಜಮೀನುಗಳಿಗೆ ಸರ್ಕಾರದ ಸಚಿವರು, ಉನ್ನತಮಟ್ಟದ ಅಧಿಕಾರಿಗಳಾಗಲೀ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.

ಸಚಿವ ಸಂಪುಟ ಸಭೆಯಲ್ಲಿ ಕೂಡ ಸರಿಯಾದ ಚರ್ಚೆ ಮಾಡಿಲ್ಲ. ಹಾಗಾಗಿ ರೈತರ ಪರಿಹಾರಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇವೆ. ರೈತರ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಉದಾಸೀನವನ್ನು ಸರ್ಕಾರ ಮಾಡಬಾರದು ಎಂದು ಹೇಳಿದರು.

ಕಾರ್ಯಕಾರಿಣಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಉಪಾಧ್ಯಕ್ಷ ಗುರುಪ್ರಸಾದ, ರಾಜ್ಯ ಕಾರ್ಯದರ್ಶಿ ಫಕೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಭೋಜಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ಡಾ.ಪುಷ್ಪಲತಾ, ರಾಜ್ಯ ಕಾರ್ಯದರ್ಶಿ ಬಾಳಮ್ಮ ಮುದೇನೂರು, ದಾವಣಗೆರೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ, ಜಗಳೂರು ತಾಲೂಕು ಅಧ್ಯಕ್ಷ ಕುಮಾರ ಭರಮಸಮುದ್ರ, ಮುಖಂಡರಾದ ಮರೇನಳ್ಳಿ ಓಬಳೇಶ ನಾಯಕ ಮತ್ತಿತರರಿದ್ದರು.

- - -