ಸಾರಾಂಶ
ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಬಸವಣ್ಣನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಣ್ಣನ ಅನುಯಾಯಿಗಳು ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಹಸೀಲ್ದಾರ ಮೂಲಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಹೇಳಿದರು.
ಬಸವಣ್ಣ ನವರಂಗ ನೀವು ಹೋಗಿ ಹೊಳ್ಯಾಗ ಜಿಗೀರಿ ಎಂದು ಅತ್ಯಂತ ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ಬಸವಣ್ಣನವರಿಗೆ ಅಪಚಾರ ಮಾಡಿದ್ದಾರೆ. ಇದು ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಕೂಡಲೇ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಟಿ. ಬಸವರಾಜ ಮಾತನಾಡಿ, ಮಾನವತಾವಾದಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಇತಿಹಾಸವನ್ನು ಅರಿಯದ ಶಾಸಕ ಯತ್ನಾಳ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅದನ್ನು ಸಮರ್ಥಿಸಿಕೊಂಡಿರುವ ಶಾಸಕರ ಅನುಚಿತ ವರ್ತನೆ ಅಕ್ಷಮ್ಯ ಅಪರಾಧವಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಹಾಳು ಮಾಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಇಂತಹ ಶಾಸಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಯಿಸಿದರು.ಈ ಸಂದರ್ಭ ಮಹಾದೇವಪ್ಪ ಮಹಾಲಿಂಗಪೂರ, ಕಳಕನಗೌಡ ರೆಡ್ಡೆರ, ಶರಣಪ್ಪ ಜಿಗೇರಿ, ಮಹಾದೇವಪ್ಪ ಸೇರಿದಂತೆ ಬಸವ ಸಮಿತಿಯ ಹಾಗೂ ಜಾಗತಿಕ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಣ್ಣನ ಅನುಯಾಯಿಗಳು ಇದ್ದರು.