ಸಾರಾಂಶ
ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಕೆಸರುಗದ್ದೆ ಕ್ರೀಡಾಕೂಟದ ಅನುಭವ ಹಂಚಿಕೊಂಡರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಪರಮೇಶ್ ಅವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.ಕೊಡ್ಲಿಪೇಟೆ ವ್ಯಾಪ್ತಿಯ ಕ್ಯಾತಿ, ಊರುಗುತ್ತಿ ಮುಂತಾದ ಗ್ರಾಮಗಳಲ್ಲಿ ಕ್ಯಾತಿ ಹೊಳೆ ಹರಿಯುತ್ತದೆ. ಮಳೆಗಾಲದಲ್ಲಿ ಹೊಳೆ ಬದಿಯಲ್ಲಿರುವ ರೈತರ ಗದ್ದೆಸಾಲು ಸಂಪೂರ್ಣವಾಗಿ ಹೊಳೆ ನೀರಿನಿಂದ ಮುಳುಗಡೆಯಾಗುತ್ತದೆ. ಈ ಕಾರಣದಿಂದ ಹೊಳೆ ಬದಿಯಲ್ಲಿರುವ ರೈತರು ಮಳೆಗಾಲದಲ್ಲಿ ಗದ್ದೆಯಲ್ಲಿ ಬತ್ತ ನಾಟಿ ಮಾಡುವುದಿಲ್ಲ. ಅಕ್ಟೋಬರ್- ನವಂಬರ್ ತಿಂಗಳಲ್ಲಿ ಹೊಳೆ ನೀರು ಕಡಿಮೆಯಾಗುವುದರಿಂದ ಈ ಭಾಗದ ರೈತರು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಗದ್ದೆಯಲ್ಲಿ ಉಳಿಮೆ ಮಾಡುತ್ತಾರೆ ನವಂಬರ್ ಕೊನೆ ಅಥವಾ ಡಿಸಂಬರ್ ತಿಂಗಳ ಪ್ರಾರಂಭದಲ್ಲಿ ಬತ್ತ ನಾಟಿ ಮಾಡುತ್ತಾರೆ.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಪರಮೇಶ್ ಅವರಿಗೆ ಸೇರಿದ ಬತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಕೈಚೆಂಡು ಎಸೆತ, ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹುರುಪಿನಿಂದ ಭಾಗವಹಿಸಿ ಕೆಸರುಗದ್ದೆ ಕ್ರೀಡಾಕೂಟದ ಅನುಭವಗಳನ್ನು ಹಂಚಿಕೊಂಡರು.ಕ್ರೀಡಾಕೂಟವನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಪರಮೇಶ್ ಉದ್ಘಾಟಿಸಿದರು. ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರಂಜನ್, ಉಪನ್ಯಾಸಕರಾದ ಕೆ.ಕೆ.ಅಭಿಲಾಷ್, ಕೆ.ಎಚ್.ಯೋಗೇಂದ್ರ, ಜಿ.ಎಸ್.ಕಾವ್ಯ, ರೇಣುಕಾ, ಶಶಿಕುಮಾರ್, ಗುಣಶ್ರೀ, ಶ್ರೇಯಾ, ಯೋಗಿತಾ, ಭಾನುಮತಿ, ಅಸ್ಪೆಯಾ ಸುಲ್ತಾನ್ ಮುಂತಾದವರು ಹಾಜರಿದ್ದರು.