ಸಾರಾಂಶ
ಫೆಂಗಲ್ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ಆಗಿದ್ದು ಇದರಿಂದ ಕಲ್ಪತರು ನಾಡಿನ ಜನ ಜಾನುವಾರುಗಳ ಪ್ರಮುಖ ಆಹಾರ ಬೆಳೆಯಾದ ರಾಗಿ ಕಟಾವು ನಡೆಯುತ್ತಿರುವ ಮಧ್ಯೆ ಮಳೆ ಬರುತ್ತಿರುವುದರಿಂದ ರಾಗಿ ಬೆಳೆ ಸಂಪೂರ್ಣ ಭೂಮಿ ಪಾಲಾಗಿದೆ. ಮೋಡಮುಸುಕಿರುವ ವಾತಾವರಣದಲ್ಲಿ ಸುರಿಯುತ್ತಿರುವ ಜಡಿ ಮಳೆಯಿಂದ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ
ಕನ್ನಡಪ್ರಭ ವಾರ್ತೆ ತಿಪಟೂರು
ಫೆಂಗಲ್ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ಆಗಿದ್ದು ಇದರಿಂದ ಕಲ್ಪತರು ನಾಡಿನ ಜನ ಜಾನುವಾರುಗಳ ಪ್ರಮುಖ ಆಹಾರ ಬೆಳೆಯಾದ ರಾಗಿ ಕಟಾವು ನಡೆಯುತ್ತಿರುವ ಮಧ್ಯೆ ಮಳೆ ಬರುತ್ತಿರುವುದರಿಂದ ರಾಗಿ ಬೆಳೆ ಸಂಪೂರ್ಣ ಭೂಮಿ ಪಾಲಾಗಿದೆ. ಮೋಡಮುಸುಕಿರುವ ವಾತಾವರಣದಲ್ಲಿ ಸುರಿಯುತ್ತಿರುವ ಜಡಿ ಮಳೆಯಿಂದ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಈ ಬಾರಿ ಮುಂಗಾರು ಮಳೆಗೆ ರೈತರು ಸಾಲಸೂಲ ಮಾಡಿಕೊಂಡು ರಾಗಿ ಬಿತ್ತಿದ್ದರು. ಆಗಾಗ ಆಗಿದ್ದ ಅಲ್ಪಸ್ವಲ್ಪ ಮಳೆಗೆ ರಾಗಿಬೆಳೆ ಹುಲುಸಾಗಿ ಬೆಳೆದಿತ್ತು. ತೆನೆ ಬಲಿತು ಕಟಾವು ಹಂತದಲ್ಲಿತ್ತು. ಆದರೆ ಚಂಡಮಾರುತದ ಜಡಿ ಮಳೆಯ ಅವಾಂತರದಿಂದ ರಾಗಿಬೆಳೆ ನೆಲಕಚ್ಚುವ ಮೂಲಕ ಭೂಮಿತಾಯಿ ಪಾಲಾಗಿದೆ. ಇದರಿಂದ ರಾಗಿಕಾಳಿನ ಗುಣಮಟ್ಟ ಹಾಳಾಗುವ ಜೊತೆಗೆ ಜಾನುವಾರುಗಳ ಮೇವು ಕೊಳೆತು ಗೊಬ್ಬರವಾಗುತ್ತಿದ್ದು, ಮುಂದೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಕಾಲ ಕಳೆಯುವಂತಾಗಿದೆ. ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ, ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳಬಹುದೇನೊ. ಸಾವಿರಾರು ರೂಪಾಯಿ ಸಾಲ ತಂದು ಉತ್ತು, ಬೀಜ-ಗೊಬ್ಬರ ಖರೀದಿಸಿ ಬಿತ್ತಿ ಹಗಲಿರುಳು ಜೋಪಾನ ಮಾಡಿದ್ದ ತಾಲ್ಲೂಕಿನ ಪ್ರಮುಖ ಜನ-ಜಾನುವಾರುಗಳ ಪ್ರಮುಖ ಅನ್ನಾಹಾರವಾದ ರಾಗಿ ಬೆಳೆ ಮೋಡ ಕವಿದ ವಾತಾವರಣಕ್ಕೆ ಮತ್ತಷ್ಟು ನಲುಗಿ ಹೋಗಿ ರೈತನ ಕಣ್ಣಲ್ಲಿ ನೀರು ತರಿಸುತ್ತಿದೆ.ಕೋಟ್ : ಅಕಾಲಿಕ ಮಳೆಯಿಂದ ರಾಗಿ ಬೆಳೆ ಹಾಳಾಗುತ್ತಿದೆ. ರೈತರಿಗೆ ಮಳೆ ಬಂದರೂ ಕಷ್ಟ ಬಾರದಿದ್ದರೂ ಕಷ್ಟವೆಂಬಂತಾಗಿದ್ದು ಕಟಾವಿಗೆ ಬಂದ ಬೆಳೆ ಕಣ್ಮುಂದೆಯೇ ಹಾಳಾಗುತ್ತಿರುವುದುನ್ನು ನೋಡುವುದಕ್ಕಾಗುತ್ತಿಲ್ಲ. ಮಳೆಯ ಅವಾಂತರದಿಂದ ರೈತರ ಮೊಗದಲ್ಲಿ ದುಗುಡ, ಆತಂಕಗಳು ಮನೆಮಾಡಿದ್ದು, ಬಹುತೇಕ ರಾಗಿ ಕಣ್ಣಮುಂದೆಯೇ ನೆಲಕಚ್ಚುತ್ತಿರುವುದರಿಂದ ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. - ಮನು, ರಾಗಿ ಬೆಳೆಗಾರರು, ನಾಗರಘಟ್ಟ.