ಸಾರಾಂಶ
ಸಭೆಯಲ್ಲಿ 2025- 26 ನೇ ಸಾಲಿನ ಮುಂಗಡ ಆಯವ್ಯಯ ಪತ್ರ(ಬಜೆಟ್) ತಯಾರಿಸಲು ಸಲಹೆ ಸೂಚನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಅವಶ್ಯಕತೆ, ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು, ಚರಂಡಿಗಳಲ್ಲಿ ಬಹುಮಹಡಿ ಕಟ್ಟಡಗಳ ನೀರು ಹರಿಯುತ್ತಿರುವುದು ಹಾಗೂ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಮೂಲ್ಕಿ ನಗರ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಸತೀಶ್ ಅಂಚನ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ಮಂಜುನಾಥ ಕಂಬಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಪ್ರದೇಶದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕೂಡಲೇ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.ಶಾಲಾ ಕಾಲೇಜುಗಳ ಬಳಿ ಮಕ್ಕಳು ಸುರಕ್ಷಿತವಾಗಿ ರಸ್ತೆದಾಟಲು ಪೊಲೀಸರನ್ನು ನಿಯೋಜಿಸಬೇಕು, ಬೈಕ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ತ್ರಿಬಲ್ ರೈಡ್ ಮೂಲಕ ಅತಿ ವೇಗದಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದು, ನಿಯಂತ್ರಿಸಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ ಶೆಟ್ಟಿ ಹಾಗೂ ಸದಸ್ಯ ಲೋಕೇಶ್ ಕೋಟ್ಯಾನ್ ಪೊಲೀಸರಿಗೆ ಸೂಚನೆ ನೀಡಿದರು.ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಸದಸ್ಯ ಯೋಗೀಶ್ ಕೋಟ್ಯಾನ್ ಕಂದಾಯ ಇಲಾಖೆಗೆ ವಿನಂತಿಸಿದರು. ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ತ್ಯಾಜ್ಯದ ಚರಂಡಿಯಲ್ಲಿರುವ ಕುಡಿಯುವ ನೀರಿನ ಪೈಪನ್ನು ತೆರವುಗೊಳಿಸಿ, ಉದ್ಯಾನವನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಗಾಂಧಿ ಮೈದಾನದ ಬಳಿಯ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ಚರಂಡಿಯಲ್ಲಿ ಸಂಗ್ರಹವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಭೀಮಾ ಶಂಕರ್ ಒತ್ತಾಯಿಸಿದರು. ನ.ಪಂ. ಸಿಬ್ಬಂದಿಗಳಿಗೆ ಬೆದರಿಕೆ ಕರೆ ಬರುತ್ತಿದ್ದು ತನಿಖೆ ನಡೆಸುವಂತೆ ಸದಸ್ಯ ಬಾಲಚಂದ್ರ ಕಾಮತ್ ಒತ್ತಾಯಿಸಿದರು. ನಗರ ಪಂಚಾಯಿತಿ ಸದಸ್ಯರ ಆಯಾ ವಾರ್ಡ್‌ಗಳಲ್ಲಿ ಕಾಮಗಾರಿ ನಡೆಸುವಾಗ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯೆ ವಂದನಾ ಕಾಮತ್ ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿ ಮಧುಕರ್ ಸಮ್ಮತಿಸಿ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ 2025- 26 ನೇ ಸಾಲಿನ ಮುಂಗಡ ಆಯವ್ಯಯ ಪತ್ರ(ಬಜೆಟ್) ತಯಾರಿಸಲು ಸಲಹೆ ಸೂಚನೆ ನೀಡಲಾಯಿತು. ಸಾಮಾನ್ಯ ಸಭೆಯಲ್ಲಿ ನಗರ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.