ಸಾರಾಂಶ
ಶಿರಸಿ: ಬನವಾಸಿ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬನವಾಸಿ ಗ್ರಾಪಂ ಹಾಗೂ ಸಾರ್ವಜನಿಕರು ಶನಿವಾರ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಇತ್ತೀಚೆಗೆ ಕೆಲ ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಕುಡಿಯುವ ನೀರಿನ ಒವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರನ್ನು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಕಡಿಮೆ ವೋಲ್ಟೇಜ್ ನಿಂದಾಗಿ ಪ್ರತಿನಿತ್ಯ ಮೋಟರ್ ಸುಡುತ್ತಿದ್ದು, ಕಚೇರಿಯಲ್ಲಿ ಕಂಪ್ಯೂಟರ್ ಕೆಲಸಗಳಿಗೂ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸ್ಕಾಂ ಅಧಿಕಾರಿಗಳು ಬನವಾಸಿ ಪಟ್ಟಣಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ನಿಲ್ಲಿಸಲಾಗುವುದು. ಜೊತೆಗೆ ಗ್ರಾಪಂ ಅಧ್ಯಕ್ಷರ ಮುಂದಾಳತ್ವದಲ್ಲಿ ಸದಸ್ಯರು, ಸಾರ್ವಜನಿಕರು, ರೈತರು ಹೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ಅಧಿಕಾರಿ ಪ್ರಕಾಶ ಮಾತನಾಡಿ, ಶಾಖಾ ವ್ಯವಸ್ಥಾಪಕರು ರಜೆಯಲ್ಲಿರುವುದರಿಂದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾಸಿಂಖಾನ್, ಉಪಾಧ್ಯಕ್ಷ ಸಿದ್ದವೀರೇಶ ನರೇಗಲ್, ಸದಸ್ಯರಾದ ಅಶೋಕ ಪೊನ್ನಪ್ಪ, ಹಸೀನಾ ಜೈರುದ್ದೀನಸಾಬ, ಆನಂದ ಚನ್ನಯ್ಯ, ಜಮೀಲ ಖಾನ್, ಗ್ರಾಮಸ್ಥರಾದ ಅರವಿಂದ ಶೆಟ್ಟಿ, ಜಯಶಂಕರ ಮೇಸ್ತ್ರಿ, ಸತೀಶ್ ಕೆರೊಡಿ, ಸಚೀನ ಮಾಳವದೆ, ಶಾಂತಲಾ ಕಾನಳ್ಳಿ, ಜಗದಂಬ ಪಟಗಾರ ಇದ್ದರು.