ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಮಳವಳ್ಳಿ- ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಸದಸ್ಯರು ಕಾಗೇಪುರ ಕಾವೇರಿ ನೀರಾವರಿ ನಿಗಮದ ಎದುರು ಪ್ರತಿಭಟನೆ ನಡೆಸಿದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ಮಾತನಾಡಿ, ಕಳೆದ ಒಂದು ತಿಂಗಳಿಂದ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ, ಇಂದಿಗೂ ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ವ್ಯವಸಾಯಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂದರು.
ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ನಾಟಿ ಮಾಡಲು ಹಾಕಿದ್ದ ಪೈರು ಒಣಗುತ್ತಿವೆ. ಕಬ್ಬು ನಾಟಿ ಮಾಡಲು ರೈತರು ನೀರಿಗಾಗಿ ಕಾದು ಕುಳಿತಿದ್ದಾರೆ. ನೀರು ತಡವಾಗಿ ಬಂದರೇ ಭತ್ತದ ನಾಟಿ ಮಾಡಲು ಸಾಧ್ಯವಾಗಿಲ್ಲ. ಅದ್ದರಿಂದ ಕೂಡಲೇ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.ರೈತ ಮುಖಂಡ ದೋ.ಸಿ. ಪ್ರಕಾಶ್ ಮಾತನಾಡಿ, ಕಾಲುವೆಗೆ ಹೆಚ್ಚು ನೀರನ್ನು ಹರಿಸಿಕೊಂಡು ಕೊನೆ ಭಾಗಕ್ಕೂ ನೀರು ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಡಿಮೆ ಜಮೀನು ಪ್ರದೇಶವಿರುವ ಭಾಗಕ್ಕೆ ನೀರನ್ನು ಕಡಿಮೆ ಮಾಡಿ ಹೆಚ್ಚು ಜಮೀನು ಇರುವ ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕಾಲುವೆಗಳಲ್ಲಿ ಊಳು ತುಂಬಿದ್ದು, ಮಣ್ಣನ್ನು ತೆರೆವುಗೊಳಿಸಿ ನೀರು ಮುಂದೆಕ್ಕೆ ಹೋಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕೊನೆ ಭಾಗಕ್ಕೆ ನೀರು ತಲುಪದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾವೇರಿ ನೀರಾವರಿ ನಿಗಮದ ಅಧಿಕಾರಿ ಬಾಬುಕೃಷ್ಣ ಹಾಗೂ ಎಇಇ ಭರತೇಶ್ ಕುಮಾರ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ರೈತರಿಗೆ ತೊಂದರೆಯಾಗದಂತೆ ಈಗಾಗಲೇ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೊನೆ ಭಾಗಕ್ಕೂ ಸಮರ್ಪಕ ನೀರು ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಬಸವರಾಜು, ರೈತ ಸಂಘದ ಮುಖಂಡರಾದ ಅಣ್ಣೂರು ಮಹೇಂದ್ರ, ಜಯರಾಮು, ಪ್ರಭುಲಿಂಗು, ಬಿಳಿಗೌಡ, ಸಿ.ನಾಗರಾಜು, ಸಿದ್ದೇಗೌಡ, ರಾಮಣ್ಣ, ಮಲ್ಲೇಶ್, ತಮ್ಮಯ್ಯ, ನಂಜುಂಡೇಗೌಡ, ದೊಡ್ಡಣ್ಣ ಸೇರಿದಂತೆ ಇತರರು ಇದ್ದರು.