ಬಜೆಟ್‌ನಲ್ಲಿ ಗೌರವಧನ ಹೆಚ್ಚಳ ಘೋಷಣೆಗೆ ಆಗ್ರಹ

| Published : Jan 29 2025, 01:30 AM IST

ಸಾರಾಂಶ

ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರಸಕ್ತ ಬಜೆಟ್‍ನಲ್ಲಿ ಗೌರವ ಧನ ಹೆಚ್ಚಳ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ 6ನೇ ಗ್ಯಾರಂಟಿಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ15 ಸಾವಿರ, ಸಹಾಯಕಿಯರಿಗೆ 10 ಸಾವಿರ ರು. ಗೌರವಧನ ನೀಡಬೇಕು. ರಾಜ್ಯದಲ್ಲಿ ಒಂದು 1.40 ಲಕ್ಷ ಅಂಗನವಾಡಿ ನೌಕರರು ಜೀವನ ಭದ್ರೆತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಲಾಲನೆ, ಪಾಲನೆ, ಶಾಲಾ ಪೂರ್ವ ಶಿಕ್ಷಣ ನೀಡುವುದು. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಪೂರೈಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಸರ್ಕಾರ ತಿರಸ್ಕರಿಸುತ್ತ ಬರುತ್ತಿರುವುದು ನೋವಿನ ಸಂಗತಿ ಎಂದು ಪ್ರತಿಭಟನಾಕಾರರು ತಮ್ಮ ನೋವು ತೋಡಿಕೊಂಡರು.

ಗುಜರಾತ್ ಉಚ್ಚ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗಧಿಗೊಳಿಸುವಂತೆ ಆದೇಶಿಸಿ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗೌರವ ಧನ ಹೆಚ್ಚಳವಾಗಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಒತ್ತಾಯಿಸಿದರು.ಈ ವೇಳೆ ಎಸ್.ಭಾಗ್ಯಮ್ಮ,ಜಮುನಾಬಾಯಿ,ಪಿ.ಕೆ.ವಿನೋದಮ್ಮ,ಎಂ.ಸಾವಿತ್ರಮ್ಮ, ರಾಧಮ್ಮ, ಈ.ಸತ್ಯಕೀರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.