ಕನ್ನಡ ಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಶಿವಸಮುದ್ರ (ಬ್ಲಫ್)ನ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸದ ವೇಳೆ ಗಾಯಗೊಂಡಿರುವ ಹೊರಗುತ್ತಿಗೆ ಕಾರ್ಮಿಕನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಶಿವಸಮುದ್ರ (ಬ್ಲಫ್)ನ ಕರ್ನಾಟಕ ವಿದ್ಯುತ್ ನಿಗಮದ ಕಚೇರಿ ಎದುರು ಸೇರಿದ ಸದಸ್ಯರು ಉಪಕರಣಗಳ ನವೀಕರಣ ಕೆಲಸ ನಿರ್ವಹಿಸುತ್ತಿರುವ ಆ್ಯಂಡ್ರಿಟ್ಜ್ ಹಾಗೂ ಇ.ಎಂ.ಫ್ಯಾಬ್ರಿಕೇಟರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ಅಭಿಷೇಕ್ ಎಂಬುವವನಿಗೆ ಕೆಲಸದ ಸ್ಥಳದಲ್ಲಿ ಅವಘ ನಡೆದು ಕೈ ಮೂಳೆ ಮುರಿದಿದೆ. ಆತನ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ನೀಡುವಂತೆ ಆಗ್ರಹಿಸಿದರು.

ಸಿಐಟಿಯು ಮುಖಂಡ ವಿಷಕಂಠು ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮ ಜಲ ವಿದ್ಯುತ್ ಸ್ಥಾಪನೆಯಾದ ಶಿವಸಮುದ್ರದಲ್ಲಿ ಹಲವು ಖಾಸಗಿ ಕಂಪನಿಗಳು ಜಲ ವಿದ್ಯುತ್ ಉತ್ಪಾದನೆ ಸೇರಿದಂತೆ ಇನ್ನಿತರ ಉತ್ಪಾದನಾ ಘಟಕಗಳಿವೆ. ಇಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯ ಮೂಲ ಸೌಕರ್ಯ ನಿಗದಿತ ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕೆಲಸದ ಸ್ಥಳದಲ್ಲಿ ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳದೇ ಅವಘಡಗಳಾದಾಗ ಮಾನವೀಯ ನೆಲೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ, ಕುಟುಂಬ ನಿರ್ವಹಣೆಗೆ ಕನಿಷ್ಠ ಸೌಲಭ್ಯ ಒದಗಿಸುತ್ತಿಲ್ಲ. ಕಾರ್ಮಿಕರ ಶ್ರಮವನ್ನು ಶೋಷಣೆ ಮಾಡಿ ಖಾಸಗಿ ಕಂಪನಿಗಳು ಆದಾಯ ಗಳಿಸುತ್ತಿದೆ ಎಂದು ಆರೋಪಿಸಿದರು.


ಗಾಯಗೊಂಡಿರುವ ಅಭಿಷೇಕ್ ಗೆ ಅಗತ್ಯ ಚಿಕಿತ್ಸಾ ವೆಚ್ಚ, ಪರಿಹಾರ ಹಾಗೂ ಆತ ದೈಹಿಕವಾಗಿ ಸಮರ್ಥನಾಗುವವರೆಗೆ ಸಂಬಳ ಮತ್ತು ದೈಹಿಕ ಸಾಮರ್ಥ್ಯ ಸರಿಹೋದ ತಕ್ಷಣ ಆತನ ಸಂಬಳ ಹೆಚ್ಚು ಮಾಡಿ ಕೆಲಸ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಖಾಸಗಿ ಕಂಪನಿಗಳ ಶೋಷಣೆ ವಿರುದ್ಧ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.