ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

| Published : Jun 03 2024, 12:31 AM IST

ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಿ.ನಾಗೇಂದ್ರ ಇಬ್ಬರೂ ರಾಜೀನಾಮೆ ನೀಡಬೇಕು ಹಾಗೂ ಕೂಡಲೇ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಶಿರಸ್ತೇದಾರ್ ಜಗದೀಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನಕಪುರ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಿ.ನಾಗೇಂದ್ರ ಇಬ್ಬರೂ ರಾಜೀನಾಮೆ ನೀಡಬೇಕು ಹಾಗೂ ಕೂಡಲೇ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಶಿರಸ್ತೇದಾರ್ ಜಗದೀಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ವಾಲ್ಮೀಕಿ ನಿಗಮದ ಪರಿಶಿಷ್ಟ ಜಾತಿ ಮತ್ತು ವರ್ಗದ ಬಡವರ ಹಣವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ಹಿಂದುಳಿದ ಸಮುದಾಯದ ನಿಗಮಕ್ಕೆ ನ್ಯಾಯ ಕೊಡಿಸಬೇಕಾಗಿದ್ದ ಸರ್ಕಾರ ತಮ್ಮ ಪರವಾಗಿ ಕೆಲಸ ಮಾಡುವ ಎಸ್‌ಐಟಿ ರಚಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಹಾಗೂ ಸಚಿವರಿಗೆ ಕ್ಲೀನ್‌ಚಿಟ್ ನೀಡುವ ಹುನ್ನಾರ ನಡೆಸುತ್ತಿದೆ. ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಿ ಯೂನಿಯನ್ ಬ್ಯಾಂಕ್ ಬರೆದಿರುವ ಪತ್ರವನ್ನು ಆಧರಿಸಿ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ಮೊತ್ತದ ಹಣದಲ್ಲಿ ದುರುಪಯೋಗವಾಗಿದೆ. ಸಚಿವ ಬಿ.ನಾಗೇಂದ್ರ ಈ ಪ್ರಕರಣದಲ್ಲಿ ಮೌಖಿಕವಾಗಿ ಆದೇಶ ನೀಡಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು. ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿ ಸಿಐಡಿ ಹಾಗೂ ಅವರೇ ರಚಿಸುವ ಎಸ್‌ಐಟಿ. ತನಿಖೆ ನಡೆಸುತ್ತಿರುವುದರಿಂದ ಸತ್ಯಾಸತ್ಯತೆ ಹೊರಬೀಳಲು ಸಾಧ್ಯವಿಲ್ಲ, ನಿಗಮದ ಅಧೀಕ್ಷಕ ಚಂದ್ರಶೇಖರ್ ಬಹು ಕೋಟಿ ಹಣ ವರ್ಗಾವಣೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ನಮೂದಿಸಿ ಅವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ. ಈ ಎಲ್ಲಾ ಸತ್ಯಗಳು ಕಣ್ಣ ಮುಂದೆ ಕಾಣುತ್ತಿದ್ದರೂ ಸಹ ಎಸ್‌ಐಟಿ ತನಿಖೆಯ ನಾಟಕದಡಿ ಪ್ರಕರಣವನ್ನು ಹಳ್ಳ ಹಿಡಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಪ್ರಾಮಾಣಿಕ ಅಧಿಕಾರಿಗಳಿಗೆ ಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ. ಸಚಿವರ ಮಾತನ್ನು ಕೇಳದ ನೌಕರರಿಗೆ ಹಿಂಸೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಭ್ರಷ್ಟಾಚಾರದ ಹಣ ಎಲ್ಲಿಂದ, ಯಾರಿಗೆ ಹಾಗೂ ಯಾರು ದುಡ್ಡು ಪಡೆದಿದ್ದಾರೆ ಎನ್ನುವ ಕುತೂಹಲದ ಪ್ರಶ್ನೆಗಳಾಗಿದ್ದು ಪ್ರಕರಣದ ಸಮಗ್ರ ತನಿಖೆ ನಡೆಸಲು ಸಚಿವರ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದರು.

ಕೆಆರ್‌ಎಸ್‌ ಪಕ್ಷದ ಹೊಸದುರ್ಗದ ಪ್ರಶಾಂತ್ ಮಾತನಾಡಿ, ಹಿರಿಯ ಅಧಿಕಾರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಹೊರಗೆ ತರಲಾರದೆ ಬೇಸತ್ತು ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇದರ ಹಿಂದೆ ಸಚಿವರು, ಹಲವು ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕೆಂದು ಸರ್ಕಾರ ವನ್ನು ಆಗ್ರಹಿಸಿದರು.

ರೈತಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್, ದುಂಡಪ್ಪ, ಕೆ.ಆರ್.ಸುರೇಶ್, ದುರ್ಗೇಶ್, ಸ್ವಾಮಿ, ಭಾರತೀಯ ಮೂಲ ನಿವಾಸಿ ಕಾವಲುಪಡೆ ಅಧ್ಯಕ್ಷ ರಾಜಮೌರ್ಯ, ಗೋಪಿ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣವನ್ನು ಸಿಬಿಐಗೆ ಒಪ್ಪಿಸಿ ಸಚಿವ ಬಿ.ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ತಾಲೂಕು ಪದಾಧಿಕಾರಿಗಳು ಕನಕಪುರ ಶಿರಸ್ತೇದಾರ್ ಜಗದೀಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.