ರಾಣಿಬೆನ್ನೂರು: ನಗರದಲ್ಲಿನ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿ ಅವುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಶನಿವಾರ ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಅಲ್ತಾಫ ನಗರ, ಸಿದ್ಧೇಶ್ವರ ನಗರ, ಕೊರವರ ಓಣಿ, ವೀಣಾ ಟಾಕೀಜ್ ಹತ್ತಿರ, ಹಳೆ ತರಕಾರಿ ಮಾರ್ಕೆಟ್ ಹಿಂಭಾಗ, ಮೀನು ಮಾರ್ಕೆಟ್ ಹತ್ತಿರ, ಸೈಕಲಗಾರ ಓಣಿ, ಕೆಎಂಪಿ ಸರ್ಕಲ್ ಹಿಂಭಾಗ, ಚಕ್ಕಮಕ್ಕಿ ದುರ್ಗಮ್ಮನ ಗುಡಿ ಪಕ್ಕ ಮುಂತಾದ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಕಾರ ಇವುಗಳನ್ನು ಮೂರು ದಿನಗಳ ಒಳಗಾಗಿ ಶಾಶ್ವತವಾಗಿ ಬಂದ್ ಮಾಡಿಸಿ ಅವುಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂ ಸಮಾಜ ಸೇರಿಕೊಂಡು ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸಬೇಕಾಗುತ್ತದೆ. ಅದಕ್ಕೆ ನಗರಸಭೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಿನಯಗೌಡ ಬಾಳನಗೌಡ್ರ, ಕೊರವರ, ಅನಿಲ ಮಳವಳ್ಳಿ, ಶರತಕುಮಾರ ನೂಲಗೇರಿ, ಶಶಿ ಬಳ್ಳಾರಿ, ಬಸು ರಾಜನಹಳ್ಳಿ, ಬೀರಪ್ಪ ಗುದಿಗೇರ ಇದ್ದರು.