ಸಾರಾಂಶ
ಬೆಂಗಳೂರು : ದುಬಾರಿ ಮೆಟ್ರೋ ಪ್ರಯಾಣ ದರವನ್ನು ಇಳಿಸಬೇಕು ಹಾಗೂ ಕೊನೆ ಮೈಲಿ ಸಂಪರ್ಕವನ್ನು ಇ-ಸ್ಕೂಟರ್ ಸೇರಿ ಎಲೆಕ್ಟ್ರಿಕ್ ವಾಹನಗಳ ಮೂಲಕ ಸಂಪರ್ಕಿಸುವಂತೆ ಆಗ್ರಹಿಸಿ ಬೆಂಗಳೂರು ಮೆಟ್ರೋ ಸಬ್ ಅರ್ಬನ್ ರೈಲ್ ಪ್ರಯಾಣಿಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ ಮಂಡೋತ್, ದರ ಏರಿಕೆ ಕುರಿತು ಜನತೆ ತೀವ್ರ ಅಸಮಾಧಾನಗೊಂಡಿದ್ದಾರೆ. ಏರಿಕೆ ಬಳಿಕ ಪರಿಷ್ಕರಿಸಿ ದರ ಇಳಿಸಿರುವುದು ಕೇವಲ ಒಂದಿಷ್ಟು ಜನರಿಗೆ ಮಾತ್ರ ಪ್ರಯೋಜನ ಆಗಿದೆ ಎಂದು ಹೇಳಿದ್ದಾರೆ.
ದರ ಪರಿಷ್ಕರಣ ಕಮಿಟಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ದರ ಏರಿಕೆಯನ್ನು ಒಂದು ವರ್ಷ ಮುಂದೂಡುವಂತೆ ಅಥವಾ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ ಆರಂಭವಾಗುವ ತನಕವಾದರೂ ಮುಂದೂಡುವಂತೆ ಕೋರಿದ್ದೆವು. ಆದರೆ, ಅಷ್ಟರಲ್ಲೇ ದರ ಏರಿಕೆಯಾಗಿದ್ದು ಪ್ರಯಾಣಿಕರು ಶೇ.70ರಿಂದ ಶೇ.110ರವರೆಗೆ ಹೆಚ್ಚುವರಿ ಮೊತ್ತ ನೀಡಬೇಕಿದ್ದು, ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಆದಾಯ ಕ್ರೋಢಿಕರಣಕ್ಕೆ ಬಾಡಿಗೆ, ಜಾಹೀರಾತು ಸೇರಿ ಇತರೆ ಮೂಲಗಳನ್ನು ಕಂಡುಕೊಳ್ಳಬೇಕು. ಮೆಟ್ರೋ ಪ್ರಯಾಣದ ದಟ್ಟಣೆ ಅವಧಿಯಲ್ಲಿ ಹೆಚ್ಚಿನ ರಿಯಾಯಿತಿ, ಟಾಪ್ ಅಪ್ ₹1000 ಮಾಡಿಕೊಂಡಲ್ಲಿ ಹೆಚ್ಚಿನ ಪ್ರಯಾಣದ ಅವಕಾಶ, ಪಾರ್ಕಿಂಗ್ ಶುಲ್ಕವನ್ನು ಡಿಜಿಟಲ್ ಆಗಿ ಪಾವತಿಸಿದವರಿಗೆ ರಿಯಾಯಿತಿ ಸೇರಿ ಇತರೆ ಕ್ರಮದ ಮೂಲಕ ಪ್ರಯಾಣಿಕರನ್ನು ಸೆಳೆಯಲು ಮುಂದಾಗುವಂತೆ ನಿಗಮಕ್ಕೆ ಕೋರಿದ್ದೇವು ಎಂದು ತಿಳಿಸಿದರು.
--ಮಧ್ಯಮ, ಕಾರ್ಮಿಕ ವರ್ಗ ಮೆಟ್ರೋ ಪ್ರಯಾಣದಿಂದ ವಿಮುಖವಾಗುತ್ತಿದೆ. ಹೀಗೆಯೇ ಮುಂದುವರಿದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ.-ಮೆಟ್ರೋ ಸಬ್ ಅರ್ಬನ್ ರೈಲ್ ಪ್ರಯಾಣಿಕರ ಸಂಘ