ಅಡಕೆ ಬೆಳೆಗಾರರಿಗೆ ಪರಿಹಾರ ನೀಡಲು ಆಗ್ರಹ

| Published : Aug 07 2024, 01:37 AM IST

ಅಡಕೆ ಬೆಳೆಗಾರರಿಗೆ ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

, ಸರ್ಕಾರ ತಕ್ಷಣ ಕ್ಷೇತ್ರವಾರು ಸಮೀಕ್ಷೆ ನಡೆಸಿ ಉದುರಿದ ಅಡಕೆ 100ಕ್ಕೆ ₹300ರಂತೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಹೊನ್ನಾವರ: ತೀವ್ರ ಮಳೆ -ಗಾಳಿಯಿಂದ ಅಡಕೆ ಬೆಳೆಗಾರರಿಗೆ ಶೇ. 40ರಷ್ಟು ಹಾನಿಯಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸಿ ಯೋಗ್ಯ ಪರಿಹಾರ ನೀಡಬೇಕು. ಅಲ್ಲದೇ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಜಿಲ್ಲಾ ಉಪಾಧ್ಯಕ್ಷ ಡಿ.ಎಂ. ನಾಯ್ಕ ಅವರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಭಾರೀ ಮಳೆಯಿಂದ ಅಡಕೆ ಮುಗುಟು ಹಾಗೂ ಹಸಿ ದೊಡ್ಡ ಅಡಕೆ ಅತಿಯಾಗಿ ಉದುರಿದ್ದು, ಜತೆಗೆ ಕೊಳೆರೋಗ ಬಾಧಿಸಿದ್ದು, ಇದರಿಂದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ತಕ್ಷಣ ಕ್ಷೇತ್ರವಾರು ಸಮೀಕ್ಷೆ ನಡೆಸಿ ಉದುರಿದ ಅಡಕೆ 100ಕ್ಕೆ ₹300ರಂತೆ ಪರಿಹಾರ ನೀಡಬೇಕು. ಮಳೆ- ಗಾಳಿಯಿಂದ ಬಹಳಷ್ಟು ಅಡಕೆ ಮರಗಳು ಬಿದ್ದಿವೆ. ಒಂದಕ್ಕೊಂದು ಅಡಕೆ ಮರಗಳು ತಿಕ್ಕಿ ತುಂಬಾ ಅಡಕೆಗಳು ಉದುರಿ ರೈತರಿಗೆ ತುಂಬಾ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ಅಡಕೆ ನೀರಿನಲ್ಲಿ ತೇಲಿ ಹೋಗಿದೆ.ಮಂಗಗಳ ಕಾಟದಿಂದ ಉದುರಿದ್ದ ತೆಂಗಿನಕಾಯಿ ಮತ್ತು ಸಿಹಿಯಾಳಗಳಿಗೆ 100ಕ್ಕೆ ₹3000 ಪರಿಹಾರ ನೀಡಬೇಕು. ಜಿಲ್ಲೆಯನ್ನು ಗುಡಗಾಡು ಪ್ರದೇಶ ಎಂದು ಘೋಷಿಸಿ ವಿಶೇಷ ಸೌಲಭ್ಯವನ್ನು ಘೋಷಿಸಬೇಕು. ಜಿಲ್ಲೆಯ ಬಹುತೇಕ ಹವ್ಯಕ, ನಾಮಧಾರಿ, ಹಾಲಕ್ಕಿ ಒಕ್ಕಲಿಗರು ಹಾಗೂ ಇತರ ಅನೇಕ ಜನಾಂಗದವರು ಹೆಚ್ಚಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ಘೋಷಿಸುವ ಹಲವು ಯೋಜನೆಗಳಿಂದ ವಂಚಿತರಾಗಿದ್ದಾರೆ‌. ಇಲ್ಲಿ ವಾಸಿಸುವ ಎಲ್ಲ ಜನಾಂಗದವರನ್ನೂ ಗುಡ್ಡಗಾಡು ಜನಾಂಗವೆಂದು ಘೋಷಿಸಿ ಸಕಲ ಸೌಲಭ್ಯ ನೀಡಬೇಕು.

ಜಿಲ್ಲೆಯೂ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಂಚಿರುವುದರಿಂದ ಅಧಿಕ ಮಳೆಯು ಬೀಳುವುದರಿಂದ ಈ ಪ್ರದೇಶಗಳು ಯಾವಾಗಲೂ ನೆರೆಯಿಂದ ಬಳಲುತ್ತಿದ್ದು, ಅದಕ್ಕಾಗಿ ನೆರೆಪೀಡಿತ ಪ್ರದೇಶ ಎಂದು ಘೋಷಿಸಬೇಕು. ಅರಣ್ಯ ಇಲಾಖೆಯವರು ಪ್ರತಿವರ್ಷ ವಿವಿಧ ಹಣ್ಣಿನ ಗಿಡಗಳನ್ನು ನೆಡದೇ ಕೇವಲ ಅಕೇಶಿಯಾ ಗಿಡಗಳನ್ನು ನೆಡುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರದ ಕೊರತೆವುಂಟಾಗಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಅಲ್ಲದೇ ಮನುಷ್ಯ ರ ಮೇಲೆ ದಾಳಿ ಮಾಡಿ ಪ್ರಾಣಹಾನಿಯಾಗಿರುವ ಉದಾರಣೆಗಳಿವೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಎಲ್ಲ ಕಡೆಗೂ ಪ್ರಾಣಿಗಳಿಗೆ ಪ್ರಿಯವಾದ ವಿವಿಧ ಹಣ್ಣುಗಳ ಗಿಡಗಳನ್ನು ನೆಡುವಂತಾಗಬೇಕು.ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಹರಿದಿರುವ ಹೊಳೆಯಿಂದ ಪ್ರತಿವರ್ಷವೂ ಮಳೆಗಾಲದಲ್ಲಿ ತುಂಬಾ ಹಾನಿಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಸುತ್ತಮುತ್ತಲಿನ ತೋಟವೆಲ್ಲಾ ಜಲಾವೃತವಾಗಿ ಅಡಕೆ ಮುಗುಳು, ಹಸಿ ಅಡಕೆ ಉದುರುವಿಕೆ ಕೊಳೆರೋಗದಿಂದ ತುಂಬಾ ಹಾನಿಯಾಗಿದೆ. ಇದಕ್ಕೆ ಕಾರಣ ಅಲ್ಲಲ್ಲಿ ಹೊಳೆ ಒತ್ತುವರಿಯಾಗಿದ್ದು, ಹೊಳೆಯಲ್ಲಿ ನಿರ್ಮಿಸಿದ ಬಾಂದಾರಗಳಲ್ಲಿ ಮರದ ದಿಮ್ಮಿಗಳು ಅದರ ಕಂಬಕ್ಕೆ ಅಡ್ಡಲಾಗಿ ನಿಂತು ಅದಕ್ಕೆ ಕಸಕಡ್ಡಿಗಳು ಸಿಕ್ಕಿಕೊಂಡು ತೋಟದಲ್ಲಿ ನೀರು ತುಂಬುವಂತಾಗಿದೆ.

ಹೊಳೆಯಲ್ಲಿ ಹೂಳು ತುಂಬಿದ್ದು, ಕೂಡಲೇ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಮರದ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಅರಣ್ಯ ಇಲಾಖೆಯವರು ಪ್ರತಿ ಗ್ರಾಮದಲ್ಲೂ ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿ ರೈತರಿಗೆ ಪ್ರಯೋಜನವಾಗುವಂತೆ ಮಾಡಬೇಕು. ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಗಿಡಗಳನ್ನು ವಿತರಿಸಿ ಅದಕ್ಕೆ ಸಿಗುವ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಮನವಿಯನ್ನು ಉಪತಹಸೀಲ್ದಾರ್ ಉಷಾ ಪಾವಸ್ಕರ ಅವರಿಗೆ ನೀಡಿದರು. ಈ ವೇಳೆ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ವಿಷ್ಣು ಈಶ್ವರ ಹೆಗಡೆ, ಉಪಾಧ್ಯಕ್ಷ ಗಣಪತಿ ಈಶ್ವರ ಹೆಗಡೆ, ಪ್ರಾಂತ ಕಾರ್ಯದರ್ಶಿ ಮಾಧವ ಹೆಗಡೆ, ಜಿಲ್ಲಾ ಹೋರಾಟ ಸಮಿತಿಯ ಸದಸ್ಯ ಎಂ.ಆರ್. ಹೆಗಡೆ, ಮಂಜುನಾಥ ನಾಯ್ಕ, ಮಂಜುನಾಥ ಗಣೇಶ ಹೆಗಡೆ ಇತರರು ಇದ್ದರು.