ಸಾರಾಂಶ
-ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕದ ವತಿಯಿಂದ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
----ಕನ್ನಡಪ್ರಭವಾರ್ತೆ ಚಿತ್ರದುರ್ಗ
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರ ಮೇಲ್ದಂಡೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ರೈತ ಸಂಘ, ಕಮ್ಯುನಿಸ್ಟ್ ಸಂಘಟನೆಗಳನ್ನೊಳಗೊಂಡ ಪ್ರತಿಭಟನಾಕಾರರು ನಗರದ ಯೂನಿಯನ್ ಪಾರ್ಕ್ ನಿಂದ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿದರು. ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಧಾನಗತಿ ತೋರುತ್ತಿವೆ. ಮಧ್ಯಕರ್ನಾಟಕದ ಇದುವರೆಗಿನ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಭದ್ರಾ ಮೇಲ್ದಂಡೆಗ ಕೇಂದ್ರ ಸರ್ಕಾರ 5300 ಕೋಟಿ ರು. ಬಿಡುಗಡೆ ಮಾಡದೆ ದ್ರೋಹ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಾ ಕೇಂದ್ರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಉದಾಸೀನ ತೋರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು, ಭೂಮಿಗಾಗಿ ಆರ್ಜಿ ಸಲ್ಲಿಸಿದವರ ಯಾವುದೇ ಕಾರಣದಿಂದ ಒಕ್ಕಲೆಬ್ಪಿಸಬಾರದು. ಅರಣ್ಯ ಇಲಾಖೆ ಅಧಿಕಾರಿಗಳು ಬಡವರಿಗೆ ನೀಡುತ್ತಿರುವ ಕಿರುಕುಳ ನಿಲ್ಲಬೇಕು. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನೊಳಗೊಂಡಂತೆ ವಸತಿ ರಹಿತರಿಗೆ ನಿವೇಶನ ಹಾಗೂ ಮನೆಗಳು ಹಂಚಿಕೆಯಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಆಹಾರ ಬೆಳೆಗಳ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ಅವುಗಳ ನಿಯಂತ್ರಿಸಬೇಕು. ಆಹಾರ ಧಾನ್ಯ ಉತ್ಪಾದನೆ ಮಾಡುವ ರೈತರಿಗೆ ದರ ಹೆಚ್ಚಳದ ಲಾಭ ಸಿಗುತ್ತಿಲ್ಲ. ಎಲ್ಲವನ್ನು ಮಧ್ಯವರ್ತಿಗಳೇ ನಿಯಂತ್ರಿಸುತ್ತಿದ್ದಾರೆ. ಪಡಿತರ ಆಹಾರಗಳ ವಿತರಣೆಯಲ್ಲಿ ಆಗುತ್ತಿರುವ ಕಲಬೆರಕೆ ನಿಯಂತ್ರಿಸಬೇಕು. ಕಲಬೆರಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ನಿರ್ಲಜ್ಯವಾಗಿ ಕಾರ್ಪೋರೇಟ್ ಕಂಪನಿಗಳ ಜೊತೆ ಕೈ ಮಿಲಾಯಿಸಿ ದುಡಿಯುವ ವರ್ಗಗಳ ಹಕ್ಕುಗಳ ಕಸಿಯಲು ಮುಂದಾಗಿದೆ. ನಮ್ಮ ಭೂಮಿ, ಶ್ರಮ, ಬೆಳೆ ಮತ್ತು ಬದುಕನ್ನು ಬಂಡವಾಳಿಗರ ಪಾದತಲಕ್ಕೆ ಒಪ್ಪಿಸಲು ಮುಂದಾಗಿದೆ. ರಾಜ್ಯ ಸರ್ಕಾರ ಕೂಡಾ ಇದೇ ತೆರನಾದ ಬಂಡವಾಳಿಗರ ಪರ ನೀತಿ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನೇ ಮುಂದುವರಿಸುತ್ತಿದೆ ಎಂದು ದೂರಿದರು.ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಯಾಗಬೇಕು, ರೈತರಿಗೆ ಮಾರಕವಾಗಿ ಪರಿಣಮಿಸಿರುವ ಕೃಷಿ ಕಾಯ್ದೆಗಳ ರದ್ದುಪಡಿಸಬೇಕು, ಕೃಷಿಗಾಗಿ ರೈತರು ಮಾಡಿರುವ ಎಲ್ಲ ಸಾಲಗಳ ಮನ್ನಾ ಮಾಡಬೇಕು, ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ಹುನ್ನಾರಗಳಿಗೆ ತಡೆ ನೀಡಬೇಕು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ಹಂಪಯ್ಯನಮಾಳಿಗೆ ಧನಂಜಯ, ಈಚಗಟ್ಟದ ಸಿದ್ದವೀರಪ್ಪ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಬಸ್ತಿಹಳ್ಳಿ ಸುರೇಶ್ ಬಾಬು, ಕೆ.ಟಿ.ತಿಪ್ಪೇಸ್ವಾಮಿ, ಸಿಪಿಐ ಮುಖಂಡರುಗಳಾದ ಸುರೇಶ್ ಬಾಬು, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಸವರಾಜಪ್ಪ, ಸಿ.ವೈ.ಶಿವರುದ್ರಪ್ಪ, ಸರ್ವೋದಯ ಕರ್ನಾಟಕದ ಜೆ.ಯಾದವರೆಡ್ಡಿ,ರೈತ ಸಂಘದ ಆರ್.ಬಿ.ನಿಜಲಿಂಗಪ್ಪ, ಹಿರೇ ಕಬ್ಬಿಗೆರೆ ನಾಗರಾಜ್, ಮಲ್ಲಾಪುರ ತಿಪ್ಪೇಸ್ವಾಮಿ, ಸಿಪಿಐ ನ ಗೌಸ್ ಫೀರ್, ಜನಶಕ್ತಿ ಸಂಘಟನೆಯ ಶಫಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.-------
ಪೋಟೋ: ಭದ್ರಾ ಮೇಲ್ದಂಡೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು----------
ಫೋಟೋ: 26 ಸಿಟಿಡಿ6