ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕರ್ಣ
ಇಲ್ಲಿನ ಕಡಲತೀರದಲ್ಲಿ ಕರ್ತವ್ಯ ನಿರ್ವಹಿಸುವ ಜೀವರಕ್ಷಕ ಸಿಬ್ಬಂದಿಗೆ ವೀಕ್ಷಣಾ ಗೋಪುರವಿಲ್ಲದೆ ಪರದಾಡುತ್ತಿದ್ದು, ಗ್ರಾಪಂ ಅಥವಾ ಪ್ರವಾಸೋದ್ಯಮ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮುಖ್ಯ ಕಡಲತೀರದಲ್ಲಿ ಆರೇಳು ವರ್ಷದ ಹಿಂದೆ ಖಾಸಗಿಯವರು ವಾಚ್ ಟವರ್ ನಿರ್ಮಿಸಿಕೊಟ್ಟಿದ್ದರು. ನಂತರ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿತ್ತು, ಬಳಿಕ ಇದನ್ನ ಎತ್ತಿ ತಂದು ಸರಿಪಡಿಸಿ ತಟದಲ್ಲಿ ಇಡಲಾಗಿತ್ತು. ತುಕ್ಕು ಹಿಡಿದು ತುಂಡಾಗಿ ಬೀಳುವ ಹಂತದಲ್ಲಿದ್ದ ಇದರಲ್ಲಿ ಜೀವರಕ್ಷಕ ಸಿಬ್ಬಂದಿಯ ಜೀವರಕ್ಷಕ ಸಲಕರಣೆ ಇಡುತ್ತಿದ್ದು, ಮೇಲ್ಭಾಗದಲ್ಲಿ ಕುಳಿತು ನೀರಿಗಿಳಿಯುವರ ಮೇಲೆ ನಿಗಾ ಇಡುತ್ತಿದ್ದರು. ಕಳೆದ ಶಿವರಾತ್ರಿ ಮಹೋತ್ಸವದ ವೇಳೆ ಗೋಕರ್ಣ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲು ಸ್ಥಳಾವಕಾಶಕ್ಕಾಗಿ ಈ ವೀಕ್ಷಣಾ ಗೋಪುರವನ್ನ ತೆರವುಗೊಳಿಸಲು ಮುಂದಾದರು. ಆಗ ಜೀವರಕ್ಷಕ ಸಿಬ್ಬಂದಿ ಟವರ್ ಅವಶ್ಯಕತೆ ಬಗ್ಗೆ ವಿವರಿಸಿದಾಗ ೧೫ ದಿನದೊಳಗೆ ಹೊಸದಾಗಿ ಟವರ್ ನಿರ್ಮಿಸಿ ಕೊಡುವ ಭರವಸೆಯನ್ನ ಗ್ರಾಪಂಯವರು ನೀಡಿ ತೆರವುಗೊಳಿಸಿದರು. ಅಲ್ಲದೇ ಶಾಸಕರಿಗೆ ಸಹ ಗಮನಕ್ಕೆ ತೆರಲಾಗಿತ್ತು, ಆದರೆ ಇದುವರೆಗೂ ಹೊಸ ಟವರ್ ನಿರ್ಮಿಸಿಲ್ಲ. ಜೀವರಕ್ಷಕ ಸಲಕರಣೆ ಶುದ್ಧ ಕುಡಿಯುವ ನೀರಿನ ಘಟಕದ ಇಕ್ಕಟ್ಟಾದ ಜಾಗದಲ್ಲಿ ಇಟ್ಟು ಕಾಲಕಳೆಯುತ್ತಿದ್ದು, ಮಳೆ ಬಂದರೆ ರಭಸದ ಗಾಳಿಯ ನಡುವೆ ಹರಸಾಹಸ ಮಾಡಿ ಛತ್ರಿ ಹಿಡಿದು ಕಾರ್ಯನಿರ್ವಹಿಸುತ್ತಿದ್ದು, ಮಳೆ ನಿಂತರೆ ಬಿಸಲಲ್ಲೆ ನಿಲ್ಲ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಳಚಿ ಬಿದ್ದ ಕುಡ್ಲೆ ಕಡಲತೀರದ ಟವರ್:ಕುಡ್ಲೆ ಕಡಲತೀರದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ತುಕ್ಕು ಹಿಡಿದು ತುಂಡಾಗಿ ಕಳಚಿ ಬಿದ್ದಿದೆ. ವಿಶಾಲ ಕಡಲತೀರದಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರು ಬರುವ ಈ ಸ್ಥಳದಲ್ಲಿ ನಿಗಾ ಇಡಲು ಎತ್ತರದ ವೀಕ್ಷಣಾ ಗೋಪುರ ತೀರ ಅವಶ್ಯವಿದೆ. ಆದರೆ ಕಳಚಿ ಬಿದ್ದು ಹಲವು ತಿಂಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವಾಗಿದೆ.
ಓಂ ಕಡಲತೀರದಲ್ಲಿ ಹೂತು ಹೋದ ವೀಕ್ಷಣಾ ಗೋಪುರ:ಓಂ ಕಡಲತೀರದಲ್ಲಿ ಅರ್ಧ ಮರಳಿನಲ್ಲಿ ಹೂತು ಹೋಗಿದ್ದು, ಸಮರ್ಪಕ ಬಳಕೆಗೆ ಸಿಗುತ್ತಿಲ್ಲ. ಇಲ್ಲಿಯೂ ಸಹ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಿದೆ.