ಬೆಳೆಗಳು ಫಸಲಿಗೆ ಬರುವ ನಿರ್ಣಾಯಕ ಹಂತದಲ್ಲಿ ನೀರು ಸ್ಥಗಿತಗೊಳಿಸಿದರೆ ರೈತರು ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗಲಿದೆ

ಕಂಪ್ಲಿ: ತುಂಗಭದ್ರಾ ಎಡದಂಡೆ (ಎಲ್‌ಎಲ್‌ಸಿ) ಹಾಗೂ ಎಚ್‌ಎಲ್‌ಸಿ ಕಾಲುವೆಗಳಿಗೆ ಡಿ.15ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ರೈತರ ಸಭೆ ನಡೆಸಲಾಯಿತು.

ಸಭೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ರೈತರು ಬೆಳೆದಿರುವ ಭತ್ತ ಮತ್ತು ಜೋಳದ ಬೆಳೆ ಇದೀಗ ತೆನೆ ಬಿಡುವ ಹಾಗೂ ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿವೆ.ಈ ಸಂದರ್ಭದಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದಿದ್ದರೆ ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಡಿ. 15ರವರೆಗೆ ಎರಡೂ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವುದು ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದರು.

ಬೆಳೆಗಳು ಫಸಲಿಗೆ ಬರುವ ನಿರ್ಣಾಯಕ ಹಂತದಲ್ಲಿ ನೀರು ಸ್ಥಗಿತಗೊಳಿಸಿದರೆ ರೈತರು ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗಲಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಆತಂಕ ಎದುರಾಗಲಿದೆ. ಇದರಿಂದ ರೈತ ಸಮುದಾಯಕ್ಕೆ ಸಾವಿರಾರು ಕೋಟಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ನೀರು ನಿರ್ವಹಣೆಯ ವಿಚಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ಆ.11ರಂದು ನಡೆದ ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರ ಹಾಗೂ ಅಧಿಕಾರಿಗಳು ನೀಡಿದ ಭರವಸೆಯ ಆಧಾರದ ಮೇಲೆಯೇ ರೈತರು ಬೆಳೆ ಬಿತ್ತನೆ ಮಾಡಿದ್ದಾರೆ. ಈಗ ಬೆಳೆಗಳು ಕಟಾವಿಗೆ ಬರುವ ಹಂತದಲ್ಲಿರುವಾಗ ನೀರು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಧಿಕಾರಿಗಳು ಸಭೆಯ ನಿರ್ಧಾರಕ್ಕೆ ಬದ್ಧರಾಗಿ ಬೆಳೆಗಳಿಗೆ ಅಗತ್ಯವಿರುವಷ್ಟು ದಿನ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.

ರೈತರ ಬೆಳೆ ಉಳಿಸುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಪಡೆಯುವುದು, ಆಂಧ್ರಪ್ರದೇಶದ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು, ಕುಡಿಯುವ ನೀರಿನ ಲಭ್ಯ ಪಾಲಿನಲ್ಲಿ ಅಗತ್ಯ ಹೊಂದಾಣಿಕೆ ಮಾಡಿಕೊಳ್ಳುವುದು ಅಥವಾ ಕಾರ್ಖಾನೆಗಳಿಗೆ ಹರಿಸುವ ನೀರಿನಲ್ಲಿ ಕೆಲಕಾಲ ಹೊಂದಾಣಿಕೆ ಮಾಡುವುದು ಸೇರಿದಂತೆ ಪರ್ಯಾಯ ಮಾರ್ಗ ಪರಿಶೀಲಿಸಬೇಕು. ಯಾವುದೇ ರೀತಿಯಲ್ಲಾದರೂ ಡಿ.15ರವರೆಗೆ ಎಲ್‌ಎಲ್‌ಸಿ ಮತ್ತು ಎಚ್‌ಎಲ್‌ಸಿ ಕಾಲುವೆಗಳಿಗೆ ನಿರಂತರ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಬೇಡಿಕೆಗೆ ಸರ್ಕಾರ ಹಾಗೂ ನೀರಾವರಿ ಇಲಾಖೆ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ನ.14ರಂದು ಕಂಪ್ಲಿಯಿಂದ ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಕೇಂದ್ರ ಕಚೇರಿವರೆಗೆ ರೈತರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಮೂಲಕ ತೆರಳಿ ನ.16ರಂದು ಸೋಮವಾರ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ರೈತರ ಹಿತ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶರಣಬಸವ, ಜೆ.ಭರಮರೆಡ್ಡಿ, ವಿ.ವೀರೇಶ, ಕೆ.ರಮೇಶ, ಟಿ.ಗಂಗಣ್ಣ, ಮಂಜುನಾಥ, ರಾಘವೇಂದ್ರ ರೆಡ್ಡಿ, ತಿಮ್ಮಪ್ಪನಾಯಕ, ಪ್ರಮುಖರಾದ ಬಿ.ಸದಾಶಿವಪ್ಪ, ಸೂಗಪ್ಪ, ಚಾನಾಳ್ ವಿರುಪಾಕ್ಷರೆಡ್ಡಿ, ವೀರಭದ್ರರೆಡ್ಡಿ, ಗುತ್ತಿಗೆನೂರು ಪ್ರಕಾಶಗೌಡ, ಶಿವಜಾತಗೌಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.