ಬೆಳೆ ಸಮೀಕ್ಷೆ, ಬರ ಪರಿಹಾರ ನೀಡಲು ಆಗ್ರಹ

| Published : Aug 14 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ ಸಮೀಕ್ಷೆ ಹಾಗೂ ಬರ ಪರಿಹಾರ ನೀಡುವಲ್ಲಿ ಆಗಿರುವಂತ ತಾರತಮ್ಯ ಸರಿಪಡಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ ಹಾಗೂ ಕರ್ನಾಟಕ ರೈತ ಸಂಘ ಮತ್ತು ರೈತ ಸೇನೆ ಸಂಘಟನೆಗಳ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ ಸಮೀಕ್ಷೆ ಹಾಗೂ ಬರ ಪರಿಹಾರ ನೀಡುವಲ್ಲಿ ಆಗಿರುವಂತ ತಾರತಮ್ಯ ಸರಿಪಡಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ ಹಾಗೂ ಕರ್ನಾಟಕ ರೈತ ಸಂಘ ಮತ್ತು ರೈತ ಸೇನೆ ಸಂಘಟನೆಗಳ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಶಿವಾನಂದ ಸರದಾರ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ರೈತರು ಬೆಳೆದ ಹೆಸರು, ಉದ್ದು, ಗೋವಿನ ಜೋಳ, ಹತ್ತಿ, ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆಗಳು ಹವಾಮಾನ ವೈಫಲ್ಯದಿಂದ ಹಾನಿಯಾಗಿದ್ದು, ಬೆಳೆದ ಬೆಳೆಗಳು ಕೈಗೆ ಎಟುಕದಂತಾಗಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೆ ಸ್ಪಂದನೆ ನೀಡುವ ಮೂಲಕ ರೈತರು ಮಾಡಿದಂತ ಖರ್ಚು ವೆಚ್ಚಗಳ ಆಧಾರದ ಮೇಲೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮಲಪ್ರಭಾ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು, ನದಿಪಾತ್ರದಲ್ಲಿರುವ ರೈತರ ಜಮೀನುಗಳಿಗೆ ರಸ್ತೆ ಇಲ್ಲದಂತಾಗಿರುವುದರಿಂದ ನದಿ ಪಾತ್ರದ ಜಮೀನುಗಳಿಗೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ಬೇಜವಾಬ್ದಾರಿತನ ತೋರಲಾಗಿದ್ದು, ತಪ್ಪು ಸಮೀಕ್ಷೆಯಿಂದ ಬೆಳೆ ವಿಮೆ ತುಂಬಿದ ರೈತರಿಗೆ ಹೊಂದಾಣಿಕೆಯಾಗದೆ, ರೈತರು ಬೆಳೆ ವಿಮೆಯಿಂದ ವಂಚಿತರಾಗುವ ಸ್ಥಿತಿ ಬಂದೊದಗಿದೆ. ಕೂಡಲೇ ಇದನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದರು.

ಕಳೆದ ವರ್ಷ ಬರಗಾಲ ಘೋಷಣೆಯಾಗಿದ್ದು, ರೈತರಿಗೆ ಸರಿಯಾಗಿ ಅದರ ಪರಿಹಾರ ಲಭ್ಯತೆ ಇಲ್ಲದಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ಅತಿವೃಷ್ಟಿಯಾಗಿದ್ದು, ಸರ್ಕಾರ ಕೂಡಲೇ ರೈತರ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಬೆಳೆ ಸಾಲ ಹಾಗೂ ರೈತರ ಯಂತ್ರೋಪಕರಣಗಳ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ರೈತರ ವಿವಿಧ ಬೇಡಿಕೆ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

ಸುರೇಶ ಸಂಪಗಾಂವಿ, ಶಂಕರ ಉಂಡಿ, ಗುರುಸಿದ್ದಪ್ಪ ಕೋಟಗಿ, ಶಂಕರ ಅಂಗಡಿ, ರಾಮರಾಜ ಇನಾಮದಾರ, ಅಲ್ಲಿಸಾಬ ನೂಲ್ವಿ, ಮಕ್ತುಮ್ ಜಕಾತಿ, ಸಿಂಧೂರ ತೆಗ್ಗಿ, ಯಲ್ಲಪ್ಪ ಅಂತಕನವರ ಹಾಗೂ ರೈತರು ಉಪಸ್ಥಿತರಿದ್ದರು.

-----