ನೇಹಾ ಹತ್ಯೆಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

| Published : Apr 24 2024, 02:28 AM IST

ಸಾರಾಂಶ

ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎನ್‌ಕೌಂಟರ್‌ ಮಾಡಬೇಕು ಎಂದು ಒತ್ತಾಯ.

ಕುಕನೂರಿನಲ್ಲಿ ಪ್ರತಿಭಟನೆಯಲ್ಲಿ ಮೊಳಗಿದ ಧ್ವನಿ । ನೇಹಾ ಹಿರೇಮಠ ಹತ್ಯೆಗೆ ನಾನಾ ಸಂಘಟನೆಯಿಂದ ಖಂಡನೆ

ಕನ್ನಡಪ್ರಭ ವಾರ್ತೆ ಕುಕನೂರುಹುಬ್ಬಳ್ಳಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಹಾಗೂ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎನ್‌ಕೌಂಟರ್‌ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಮಹಾಸಭಾ ಹಾಗೂ ಸಮಸ್ತ ನಾಗರಿಕರ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲವೇ ಆತನನ್ನು ಎನ್‌ಕೌಂಟರ್‌ ಮಾಡಬೇಕು. ಅದು ಬಹಿರಂಗವಾಗಿ, ಸಾರ್ವಜನಿಕರೆದುರೇ ಆ ಶಿಕ್ಷೆಗಳಾಗಬೇಕು ಎಂಬ ಆಗ್ರಹ ಪ್ರತಿಭಟನೆಯಲ್ಲಿ ಕೇಳಿಬಂತು.

ಬೇಡ ಜಂಗಮ ಸಮಾಜದ ತಾಲೂಕಾಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಆವರಣದಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಮಾನವರು ತಲೆ ತಗ್ಗಿಸುವಂತಹ ಘಟನೆಯಾಗಿದೆ. ನೇಹಾಳ ಪಾಲಕರಿಗೆ, ರಾಜ್ಯದ ಜನರಿಗೆ ಈ ಘಟನೆ ತುಂಬಾ ನೋವು ತರಿಸಿದೆ. ಇಂತಹ ಘಟನೆಗಳು ಯಾವ ಹೆಣ್ಣುಮಕ್ಕಳಿಗೂ ಹಾಗೂ ಪಾಲಕರಿಗೂ ಆಗಬಾರದು. ಇದೇ ಕೊನೆಯಾಗಬೇಕಾದರೆ ಆರೋಪಿಯನ್ನು ಕೂಡಲೇ ಎನ್‌ಕೌಂಟರ್ ಮಾಡಬೇಕು. ಇಲ್ಲದಿದ್ದರೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬೇಡ ಜಂಗಮ ಸಮಾಜದ ರಾಜ್ಯ ಉಪಾಧ್ಯಕ್ಷ ಸದಾಶಿವಯ್ಯ ಅರಕೇರಿಮಠ ಮಾತನಾಡಿ, ಸಾಮಾಜಿಕ ಜವಾಬ್ದಾರಿಗಳು ಕಡಿಮೆ ಆಗುತ್ತಿವೆ. ಸಮಾಜದ ಆರೋಗ್ಯ ಹದಗೆಡುತ್ತಿದೆ. ನೇಹಾಳ ವಿಚಾರವಾಗಿ ಆಕೆಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ಸಮಾಜದಲ್ಲಿ ಕೊಲೆಗಡುಕರಿಗೆ ಉಗ್ರ ಶಿಕ್ಷೆ ಆಗಬೇಕು. ಅಂದಾಗ ಅಂತಹ ಕೃತ್ಯಕ್ಕೆ ಮತ್ತೆ ಯಾರೂ ಮುಂದಾಗುವುದಿಲ್ಲ ಎಂದರು.

ಮುಸ್ಲಿಂ ಮುಖಂಡರಾದ ಹಷೀದಸಾಬ್ ಮುಬಾರಕ್, ರಷೀದಸಾಬ್ ಹಣಜಗಿ ಮಾತನಾಡಿ, ಕೊಲೆಗೈದ ಯುವಕನಿಗೆ ಶೀಘ್ರ ಸರ್ಕಾರ ಶಿಕ್ಷೆ ನೀಡಬೇಕು. ಸರ್ಕಾರ ಇಂತಹ ಘಟನೆಗಳು ಮುಂದೆ ಆಗದಂತೆ ಸೂಕ್ರ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತಕ್ಕೆ ತಲುಪಿತು. ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಲಾಯಿತು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ, ಈಶಯ್ಯ ಶಿರೂರಮಠ, ವೀರಯ್ಯ ತೊಂಟದಾರ್ಯಮಠ, ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ನಗರ ಘಟಕದ ಅಧ್ಯಕ್ಷ ರೆಹಮಾನಸಾಬ ಮಕ್ಕಪ್ಪನವರ್, ವಜೀರಸಾಬ ತಳಕಲ್, ದೇವಪ್ಪ ಸೊಭಾನದ್, ಶಿವಯ್ಯ ಸಸಿಮಠ, ಮಲ್ಲಿಕಾರ್ಜುನ್ ಕೂಡ್ಲೂರು, ಶರಣಯ್ಯ, ಮಲ್ಲಪ್ಪ ಗುತ್ತಿ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಬಸವರಾಜ ಮಂಡಲಗೇರಿ, ಬಸವನಗೌಡ ಮಾಲಿಪಾಟೀಲ್, ಕುಮಾರಸ್ವಾಮಿ ಹಿರೇಮಠ, ಸಿದ್ದಲಿಂಗಯ್ಯ ಚೌಡಿಮಠ, ರಾಜಶೇಖರಯ್ಯ ಶಿರೂರಮಠ, ಕಲ್ಲಯ್ಯ ಹಿರೇಮಠ, ವಿಶ್ವನಾಥ ಕೆಂಬಾವಿಮಠ, ಶೇಖರಯ್ಯ, ಗುದ್ನೇಯ್ಯ, ಮುತ್ತಯ್ಯ, ಸಿದ್ದಲಿಂಗಯ್ಯ ಹಿರೇಮಠ, ಶರಣಯ್ಯ ಹಿರೇಮಠ ಇತರರು ಇದ್ದರು.