ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಭ್ರೂಣ ಪತ್ತೆಗೆ ಕಡಿವಾಣ ಹಾಕಲು ರಾಜ್ಯಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನಿಗಾ ಸಮಿತಿ ರಚಿಸುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದರು.ನಿಯಮ ಬಾಹಿರವಾಗಿ ಭ್ರೂಣ ಪರೀಕ್ಷೆ ಮಾಡುತ್ತಿದ್ದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ನಡುವಿನ ಅಪವಿತ್ರ ಮೈತ್ರಿ ಅಕ್ರಮ ಭ್ರೂಣ ಪತ್ತೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿನ ಪ್ರಯೋಗಾಲಯಗಳು ಭ್ರೂಣ ಪರೀಕ್ಷೆ ಸಂಬಂಧ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಯಮಾನುಸಾರ ತಪಾಸಣೆ ನಡೆಸದೆ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪವೆಸಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಹೇಳಿದರು.ಅಕ್ರಮ ಭ್ರೂಣ ಪತ್ತೆಗೆ ಕಠಿಣ ಕಾನೂನುಗಳಿದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಜವಾಬ್ದಾರಿಯುತ ಅಧಿಕಾರಿಗಳು ಕೈಜೋಡಿಸಿರುವುದರಿಂದ ಅವು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಭ್ರೂಣ ಪತ್ತೆ ತಡೆಯುವ ಸಲುವಾಗಿಯೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪಿಸಿಟಿ ಪಿಎನ್‌ಡಿಟಿ ಕಾಯ್ದೆ ಅನುಷ್ಠಾನ ಸಮಿತಿ ಅಸ್ತಿತ್ವದಲ್ಲಿದ್ದರೂ ನಿಷ್ಕ್ರೀಯವಾಗಿದೆ. ಇದನ್ನು ವಿಸರ್ಜಿಸುವಂತೆ ಒತ್ತಾಯಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇದ್ದರೂ ಅದಕ್ಕೆ ಬೇಕಾದ ರೇಡಿಯಾಲಿಜಿಸ್ಟ್‌ಗಳನ್ನು ನೇಮಕ ಮಾಡುತ್ತಿಲ್ಲ. ಸಚಿವರು, ಜನಪ್ರತಿನಿಧಿಗಳು ರೇಡಿಯಾಲಿಜಿಸ್ಟ್‌ಗಳ ನೇಮಕದ ಬಗ್ಗೆ ದನಿ ಎತ್ತುವುದಿಲ್ಲ. ಕಟ್ಟಡಗಳನ್ನು ನಿರ್ಮಿಸಿ ಯಂತ್ರಗಳನ್ನು ಖರೀದಿಸುವುದಕ್ಕೆ ತೋರುವ ಆಸಕ್ತಿಯನ್ನು ಸರ್ಕಾರ ತಂತ್ರಜ್ಞರ ನೇಮಕಕ್ಕೆ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆಯು ಸಮಗ್ರ ಆಯಾಮಗಳಲ್ಲಿ ನಡೆಯುವ ಅವಶ್ಯಕತೆ ಇದ್ದು, ತನಿಖೆಯ ಮೇಲೆ ನಿಗಾ ವಹಿಸಲು ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿ ಸಮಿತಿ ರಚಿಸುವಂತೆ ಆಗ್ರಹಿಸಿದರು.ಈಗಾಗಲೇ ಚಾಲ್ತಿಯಲ್ಲಿರುವ ಬಾಲಿಕ ತಂತ್ರಾಂಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಕ್ರಮ ಎಸಗಿರುವ ರೋಗ ಪರೀಕ್ಷಾ ಕೇಂದ್ರಗಳ ಮೇಲೆ ಪೊಲೀಸ್ ಠಾಣೆಯಲ್ಲಿ ನಿಯಮಾನುಸಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.ಈ ಹಿಂದೆ ಜಿಲ್ಲೆಯಲ್ಲಿ ಸಾವಿರಾರು ಗರ್ಭ ನಿರೋಧಕ ಮಾತ್ರೆಗಳನ್ನು ವೈದ್ಯರ ಸಲಹಾ ಚೀಟಿಯಿಲ್ಲದೆ ವಿತರಿಸಿದ್ದು ಮತ್ತು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಪ್ರಕರಣ ಸಂಬಂಧ ನಡೆದ ತನಿಖೆ ತಾರ್ಕಿಕ ಅಂತ್ಯ ಕಂಡಿಲ್ಲ. ಔಷಧ ಕಂಪನಿಗಳ ಲಾಭಿಗೆ ಮಣಿದಿರುವ ಔಷಧ ನಿಯಂತ್ರಕರು ಹಾಗೂ ಆರೋಗ್ಯ ಇಲಾಖೆ ಇಡೀ ತನಿಖೆಯನ್ನು ಹಳ್ಳ ಹಿಡಿಸಿದೆ. ಪ್ರಕರಣವನ್ನು ಆದ್ಯತೆಯ ಮೇಲೆ ತನಿಖೆಗೆ ಪ್ರತ್ಯೇಕ ತನಿಖಾ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಬೇಕು. ಈ ಪ್ರಕರಣದಲ್ಲಿ ಔಷಧ ಕಂಪನಿಗಳೊಂದಿಗೆ ಶಾಮೀಲಾಗಿರುವ ಔಷಧ ನಿಯಂತ್ರಕರನ್ನು ಅಮಾನತ್ತಿನಲ್ಲಿರಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ.ಜಯರಾಂ, ವೆಂಕಟೇಶ್, ರಾಜುಗೌಡ ಇದ್ದರು.