ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಬಂಜಾರ ತಾಂಡಾ, ಲಂಬಾಣಿ ತಾಂಡಾಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಕೇವಲ ತಾಂಡಾ ಅಭಿವೃದ್ಧಿ ನಿಗಮವೊಂದೇ ಅದನ್ನೆಲ್ಲಾ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೆಚ್ಚಿನ ಅನುದಾನ ನೀಡುವ ಮೂಲಕ ಸ್ಪಂದಿಸಬೇಕು ಎಂದು ಜಿಲ್ಲಾ ಬಂಜಾರ(ಲಂಬಾಣಿ) ಸೇವಾ ಸಂಘ ಒತ್ತಾಯಿಸಿದೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರ, ಹಿರಿಯ ವಕೀಲ ಕೆ.ಆರ್.ಮಲ್ಲೇಶ ನಾಯ್ಕ, ಇಂದಿಗೂ ರಾಜ್ಯಾದ್ಯಂತ ತಾಂಡಾಗಳಲ್ಲಿ ಕನಿಷ್ಟ ಮೂಲ ಸೌಕರ್ಯಗಳೂ ಇಲ್ಲದೇ, ನಮ್ಮ ಸಮುದಾಯದ ಜನರು ಸಂಕಷ್ಟದ ಬಾಳು ಬಾಳುತ್ತಿದ್ದು, ಅಂತಹವರಿಗೆ ನೆಮ್ಮದಿ ಬಾಳು ಕಟ್ಟಿಕೊಡುವ ಕೆಲಸ ನಿಗಮದ ಜೊತೆಗೆ ಸರ್ಕಾರದಿಂದಲೂ ಆಗಬೇಕು ಎಂದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎನ್.ಜಯದೇವ ನಾಯ್ಕರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರಿಗೆ ಸಂಘ ಅಭಿನಂದನೆ ಸಲ್ಲಿಸುತ್ತದೆ. ರಾಜ್ಯಾದ್ಯಂತ ತಾಂಡಾಗಳ ಮೂಲ ಸೌಕರ್ಯ ಕೊರತೆ ನೀಗಿಸುವ ಸದುದ್ದೇಶದಿಂದ ಸ್ಥಾಪಿತ ತಾಂಡಾ ಅಭಿವೃದ್ಧಿ ನಿಗಮದ 6ನೇ ಅಧ್ಯಕ್ಷರಾಗಿ ಎನ್.ಜಯದೇವನಾಯ್ಕರನ್ನು ನೇಮಕ ಮಾಡಿದ ಸರ್ಕಾರದ ಕ್ರಮ ಸೂಕ್ತವಾಗಿದೆ. ಇದು ಬಂಜಾರ ಜನಾಂಗದಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ತಿಳಿಸಿದರು.ಸಮಾಜದ ಹಿರಿಯ ನಾಯಕರು, ರಾಜಕೀಯ ಹೋರಾಟಗಾರರಾರೂ ಆಗಿದ್ದ ಸಮಾಜಕ್ಕಾಗಿ ಶ್ರಮಿಸಿದ ಜಯದೇವ ನಾಯ್ಕರು ರಾಜ್ಯಾದ್ಯಂತ ಪ್ರವಾಸ ಮಾಡಿ, ತಾಂಡಾ ನಿವಾಸಿಗಳ ಜೀವನ, ಸ್ಥಿತಿಗತಿಯನ್ನು ತೀರಾ ಸನಿಹದಿಂದ ಅರಿತವರು. ನಿಗಮ ಸ್ಥಾಪನೆಗಾಗಿ ಹೋರಾಟ ಮಾಡಿದವರಲ್ಲಿ ಮುಂಚೂಣಿಯಲ್ಲಿದ್ದವರು. ಇಂತಹವರನ್ನು ನಿಗಮದ ಅಧ್ಯಕ್ಷರಾಗಿ ನೇಮಿಸಿದ್ದು ಉತ್ತಮ ಕಾರ್ಯ, ಸಮಂಜಸ ಕ್ರಮವಾಗಿದೆ ಎಂದರು.
ನಿಗಮದ ಅಧ್ಯಕ್ಷರಾಗುತ್ತಿದ್ದಂತೆಯೇ ಅತೀ ಹೆಚ್ಚು ತಾಂಡಾ ಹೊಂದಿರುವ ವಿಜಯಪುರ ಜಿಲ್ಲೆ ಪ್ರವಾಸ ಮಾಡಿ, ಅಲ್ಲಿನ ಮುಖಂಡರ ಭೇಟಿ ಮಾಡಿದ್ದಾರೆ. ಕೆಲ ತಾಂಡಾಗಳ ಸ್ಥಿತಿಗತಿ ಪರಿಶೀಲಿಸಿ, ಜು.6ರಂದು ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ಇಲಾಖೆ ಮುಖ್ಯಸ್ಥರ ಸಭೆ ಕರೆದು, ತಾಂಡಾಗಳ ಅಭಿವೃದ್ಧಿಗೆ ನಿಗಮದಿಂದಷ್ಟೇ ಅಲ್ಲ, ಸರ್ಕಾರ, ವಿವಿಧ ಇಲಾಖೆಗಳೂ ಕೈಜೋಡಿಸಬೇಕು ಎಂಬುದಾಗಿ ಹೇಳಿದ್ದಾರೆ. ಸರ್ಕಾರದ ಅಧಿಕಾರಿಗಳು ಸಹ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ಜವಾಬ್ಧಾರಿ ಎಂಬುದನ್ನು ಸೂಚ್ಯವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವಿವರಿಸಿದರು.ಬಂಜಾರ ಸಮಾಜದ ಅವಿದ್ಯಾವಂತರು, ಮಹಿಳೆಯರು, ಮಕ್ಕಳು ಗುಳೇ ಹೋಗಿ ಜೀವಿಸುತ್ತಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ತಮ್ಮ ಹೆರಿಗೆ ದಿನವೂ ಗೊತ್ತಿರುವುದಿಲ್ಲ. ಗರ್ಭಿಣಿಯರು ಕಟ್ಟಿಗೆ ತರಲು, ಜಮೀನು ಕೆಲಸಕ್ಕೆ ಹೋದಾಗ, ರಾಸು ಮೇಯಿಸಲು ಹೋದಾಗಲೇ ಹೆರಿಗೆಯಾದ ಸಾಕಷ್ಟು ನಿದರ್ಶನವಿದೆ. ತಾಂಡಾದಲ್ಲಿ ಹಸುಗೂಸುಗಳು, ಮಕ್ಕಳು, ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಗುರುತಿಸುವ ಕಾರ್ಯವು ಸೂಕ್ತವಾಗಿ ಸಾಗುತ್ತಿಲ್ಲ ಎಂದು ದೂರಿದರು.
ಅಲ್ಲದೇ, ತಾಂಡಾಗಳ ಶಾಲೆಗಳಲ್ಲಿ ಶಿಕ್ಷಕರು, ಮೂಲ ಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಬಗ್ಗೆಯೂ ನಿಗಮದ ಅಧ್ಯಕ್ಷರು ಗಮನಹರಿಸುತ್ತಿದ್ದಾರೆ. ತಾಂಡಾಗಳಿಗೆ ಮೂಲ ಸೌಕರ್ಯಗಳ ಅವಶ್ಯಕತೆ ಇದ್ದು, ಅದಕ್ಕೆ ಅಗತ್ಯ ಅನುದಾನದ ಕೊರತೆ ಇದೆ. ಈ ವಿಷಯ ಅರ್ಥ ಮಾಡಿಕೊಂಡು, ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ತಾಂಡಾಗಳ ಅಭಿವೃದ್ದಿಗೆ, ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹಕರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯದ ಸಮಸ್ತ ತಾಂಡಾ ನಿವಾಸಿಗಳು, ಬಂಜಾರ ಸಮಾಜದ ಪರವಾಗಿ ಮನವಿ ಮಾಡುತ್ತೇವೆ ಎಂದು ಮಲ್ಲೇಶ ನಾಯ್ಕ ತಿಳಿಸಿದರು.ಸಂಘದ ಕುಬೇರ ನಾಯ್ಕ, ಎಲ್.ಗಾಯಕ್, ನಂಜಾನಾಯ್ಕ ಎಸ್.ಕಬ್ಬಳ ಇತರರು ಇದ್ದರು.