ನಾಡಿನ ಕೇಂದ್ರ ಬಿಂದು ದಾವಣಗೆರೆಗೆ ಹೈಕೋರ್ಟ್ ಸಂಚಾರಿ ಪೀಠ ನೀಡುವ ಜೊತೆಗೆ ಇಲ್ಲಿನ ಬೈಪಾಸ್ ರಸ್ತೆಯ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ನ್ಯಾಯಾಲಯಗಳ ಸಂಕೀರ್ಣವನ್ನು ಹೈಕೋರ್ಟ್ ಸಂಚಾರಿ ಪೀಠಕ್ಕೆ ಕಾಯ್ದಿರಿಸುವಂತೆ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.
- ನ್ಯಾಯಾಲಯ ಸಂಕೀರ್ಣದಲ್ಲೇ ಹೊಸ ಕಟ್ಟಡ ನಿರ್ಮಿಸಲು ಹೈಕೋರ್ಟ್, ಸರ್ಕಾರಕ್ಕೆ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆನಾಡಿನ ಕೇಂದ್ರ ಬಿಂದು ದಾವಣಗೆರೆಗೆ ಹೈಕೋರ್ಟ್ ಸಂಚಾರಿ ಪೀಠ ನೀಡುವ ಜೊತೆಗೆ ಇಲ್ಲಿನ ಬೈಪಾಸ್ ರಸ್ತೆಯ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ನ್ಯಾಯಾಲಯಗಳ ಸಂಕೀರ್ಣವನ್ನು ಹೈಕೋರ್ಟ್ ಸಂಚಾರಿ ಪೀಠಕ್ಕೆ ಕಾಯ್ದಿರಿಸುವಂತೆ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸತೀಶ ಅರವಿಂದ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿ.ಎಂ.ಲಿಂಗರಾಜ ಗಾಂಧಿನಗರ, ಜಿಲ್ಲೆಯು ಕೃಷಿ, ವಾಣಿಜ್ಯ, ಶಿಕ್ಷಣ, ಜವಳಿ ಉದ್ಯಮ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಜಿಲ್ಲೆಯ ವಕೀಲರು, ಕಕ್ಷಿದಾರರಿಗೆ ನ್ಯಾಯಾಂಗ ಸೇವೆಗಾಗಿ ಬೆಂಗಳೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದು, ಇಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದರು.ನೂತನವಾಗಿ ಇಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಹೆದ್ದಾರಿಗೆ ಹೊಂದಿಕೊಂಡ ಬಡಾವಣೆ ಅದಾಗಿದ್ದು, ಬೆಂಗಳೂರು- ಧಾರವಾಡ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರು ಬಂದು, ಹೋಗುವುದಕ್ಕೂ ಸೂಕ್ತವಿದೆ. ಇಲ್ಲಿಯೇ ಸಂಚಾರಿ ಪೀಠ ಸ್ಥಾಪಿಸುವುದರಿಂದ ಹೈಕೋರ್ಟ್‌ನ ಕಾರ್ಯಭಾರದ ಒತ್ತಡವೂ ಕಡಿಮೆ ಆಗುತ್ತದೆ ಎಂದು ಹೇಳಿದರು.
ಈಗಿರುವ ಸ್ಥಳದಿಂದ ಜಿಲ್ಲಾ ನ್ಯಾಯಾಲಯವನ್ನು ತುಂಗಭದ್ರಾ ಬಡಾವಣೆ ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಿದರೆ ಜನರಿಗೆ ಅನುಕೂಲಕ್ಕಿಂತ ತೊಂದರೆ ಹೆಚ್ಚಾಗುತ್ತವೆ. ಚನ್ನಗಿರಿ, ಜಗಳೂರು, ಹರಿಹರ, ಹೊನ್ನಳಿ, ದಾವಣಗೆರೆ ತಾಲೂಕುಗಳಿಂದ ಬರುವ ಕಕ್ಷಿದಾರರು, ವಕೀಲರಿಗೂ ಹೊಸ ನ್ಯಾಯಾಲಯ ಸಂಕೀರ್ಣ ತುಂಬಾ ದೂರವಾಗುತ್ತದೆ. ಬಸ್ ನಿಲ್ದಾಣದಿಂದ ತುಂಗಭದ್ರಾ ಬಡಾವಣೆ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಹೋಗಲು 10-12 ಕಿಮೀ ಪ್ರಯಾಣವಾಗುತ್ತದೆ. ಇದರಿಂದ ಕಕ್ಷಿದಾರರಿಗೂ ಹೆಚ್ಚುವೆಚ್ಚ, ಸಮಯ ವ್ಯರ್ಥವಾಗುತ್ತದೆ. ಶೀಘ್ರ ನ್ಯಾಯ ವಿತರಣೆಗೂ ಇದರಿಂದ ಹಿನ್ನಡೆಯಾಗುತ್ತದೆ ಎಂದು ತಿಳಿಸಿದರು.ವಸತಿ ಪ್ರದೇಶದಿಂದ ದೂರವಿರುವ ಕಕ್ಷಿದಾರರು, ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು, ವಿಶೇಷಚೇತನರು, ವೃದ್ಧರು ಮತ್ತು ಮಕ್ಕಳ ರಕ್ಷಣೆ ದೃಷ್ಟಿಯಿಂದ ಇದು ತುಂಬಾ ತೊಂದರೆಯಾಗಲಿದೆ. ಹೊಸ ಕೋರ್ಟ್ ಸಂಕೀರ್ಣ ತಲುಪಲು ಹೆದ್ದಾರಿ ದಾಟಬೇಕಾಗುತ್ತದೆ. ಅಲ್ಲಿ ರಸ್ತೆ ಅಪಘಾತಗಳು ಸಂಭವಿಸಿ ಜೀವಹಾನಿ ಹಾಗೂ ಸಂಚಾರಕ್ಕೆ ತೊಂದರೆಯಾಗುವ ಅಪಾಯಗಳೂ ಇಲ್ಲದಿಲ್ಲ. ಈಗಿನ ದೇವರಾಜ ಅರಸು ಬಡಾವಣೆಯ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲೇ ಪೂರ್ವಾಭಿಮುಖವಾಗಿ ಹೊಸ ಕಟ್ಟಡ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶವಿದೆ ಎಂದು ಮಾಹಿತಿ ನೀಡಿದರು.
ಸರ್ಕಾರವು ಹಾಲಿ ಜಿಲ್ಲಾ ನ್ಯಾಯಾಲಯದ ಖಾಲಿ ಇರುವ ಜಾಗದಲ್ಲೇ ನೂತನ ನ್ಯಾಯಾಲಯಗಳ ಸಂಕೀರ್ಣ ನಿರ್ಮಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆಯು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಲ್ಲಿ ಮನವಿ ಮಾಡುತ್ತೇವೆಂದು ಹೇಳಿದರು.ಸಾಮಾಜಿಕ ಹೋರಾಟಗಾರರಾದ ಆದಿಲ್ ಖಾನ್, ಚಿದಾನಂದಪ್ಪ, ಜೀವನ್ ಅಣಬೇರು, ಪಾಪಣ್ಣ ಇತರರು ಇದ್ದರು.
- - --23ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ಸಾಮಾಜಿಕ ಹೋರಾಟಗಾರ ಸತೀಶ ಅರವಿಂದ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿ.ಎಂ.ಲಿಂಗರಾಜ ಗಾಂಧಿ ನಗರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.