ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ತಾಲೂಕಿನ ಕಂದಾಯ ಮತ್ತು ಕೃಷಿ ಇಲಾಖೆಗಳ ಅಡಿಯಲ್ಲಿ (ಪಿಆರ್) ಖಾಸಗಿ ಬೆಳೆ ಸಮೀಕ್ಷೆದಾರರ ಗೌರವಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಬೆಳೆ ಸಮೀಕ್ಷೆದಾರರ ಸಂಘದ ವತಿಯಿಂದ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ಪ್ರಭು ಬುಡಕನ್ನವರ ಮಾತನಾಡಿ, ತಾಲೂಕಿನಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಗಳ ಅಡಿಯಲ್ಲಿ ಪಿಆರ್ ಖಾಸಗಿ ಬೆಳೆ ಸಮೀಕ್ಷೆದಾರರು 2017 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಒಂದು ಪ್ಲಾಟಿಗೆ ₹ 10 ನೀಡಲಾಗುತ್ತಿದೆ. ಪ್ರತಿ ಪ್ಲಾಟ್‌ಗೆ ₹ 50ಕ್ಕೆಹೆಚ್ಚಳ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಖಾಸಗಿ ನಿವಾಸಿಗಳು ಸರ್ವೆ ಮಾಡಲು ಕ್ಷೇತ್ರಗಳಿಗೆ ಭೇಟಿ ನೀಡಿದಾಗ ವಿಷ ಜಂತುಗಳು ಮತ್ತು ಕೀಟಗಳಿಂದ ರಕ್ಷಣೆಗೆ ರಕ್ಷಣಾ ಕಿಟ್‌ಗಳನ್ನು ವಿತರಿಸಿ, ಆರೋಗ್ಯ ವಿಮೆ ಮಾಡಿಸಬೇಕು. ಎಲ್ಲರಿಗೂ ಆಯಾ ಇಲಾಖೆಯ ಗುರುತಿನ ಚೀಟಿ ನೀಡಬೇಕು. ಮುಂಗಾರು-ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಮಾತ್ರ ನಾವು ಕೆಲಸ ಮಾಡುತ್ತಿದ್ದು, ಉಳಿದ ದಿನಗಳಲ್ಲಿ ಖಾಲಿ ಇರುತ್ತೇವೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನಮ್ಮನ್ನು ಸದ್ಬಳಕೆ ಮಾಡಿಕೊಂಡು ವರ್ಷ ಪೂರ್ತಿ ಉದ್ಯೋಗ ನೀಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಮುಂಗಾರು ಬೆಳೆ ಸಮೀಕ್ಷೆ ಮಾಡುವುದಿಲ್ಲ ಎಂದು ಒತ್ತಾಯಿಸಿದರು.
ಬೆಳೆ ಸಮೀಕ್ಷೆದಾರರ ಸಂಘದ ಸರ್ವೇಶ ಹನುಮಗೌಡರ, ಶಾಂತೇಶ ಹಾಲಕೇರಿ, ಲಕ್ಷ್ಮಣ ದಾಸರ, ಶ್ರೀಶೈಲ ಗೂಳಿ, ಗಂಗಾಧರ ಬಡಿಗೇರ ಸೇರಿದಂತೆ ಇತರರು ಇದ್ದರು.