ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ವತಿಯಿಂದ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ವತಿಯಿಂದ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಘಟಕದ ಅಧ್ಯಕ್ಷ ಗಂಗಾಧರ ಬೆಂಡಲಘಟ್ಟಿ ನೇತೃತ್ವದಲ್ಲಿ ಉಪಾಧ್ಯಕ್ಷ ರಾಜೆಸಾಬ್ ಕೊಲ್ಲಾಪುರ ಸೇರಿದಂತೆ ಪರಶುರಾಮ ಭಜಂತ್ರಿ, ದುರ್ಗಪ್ಪ, ಶಿವು, ಶಂಕರ್, ಖಾಜಾ, ಅನ್ವರ್, ವಾಸು, ಖಾದ್ರಿ ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದರು.ಬಸ್ ನಿಲ್ದಾಣದಲ್ಲಿರುವ ಮಹಿಳೆಯರು ಹಾಗೂ ಪುರುಷರ ಶೌಚಾಲಯಗಳನ್ನು ಸ್ವಚ್ಛವಾಗಿಡುವುದರ ಜತೆಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿಲ್ದಾಣದಲ್ಲಿರುವ ಎರಡು ಮಹಿಳಾ ವಿಶ್ರಾಂತಿ ಕೊಠಡಿಗಳು ಖಾಲಿ ಇದ್ದರೂ ಬೀಗ ಹಾಕಿರುವುದರಿಂದ ಅವುಗಳನ್ನು ತಕ್ಷಣ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಅಲ್ಲದೆ, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ನಿರ್ವಹಣೆಗೆ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.
ನಿಲ್ದಾಣವು ಬೆಳಗ್ಗೆ ೬ರಿಂದ ಸಂಜೆ ೪ರ ವರೆಗೆ ಮಾತ್ರ ತೆರೆದಿರುವುದರಿಂದ ರಾತ್ರಿ ವೇಳೆ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಧರ್ಮಸ್ಥಳ ಸೇರಿದಂತೆ ವಿವಿಧೆಡೆಯಿಂದ ಬರುವ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸದೆ ಹೊರಗಡೆಯಿಂದಲೇ ತೆರಳುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಬಸ್ ನಿಲ್ದಾಣವನ್ನು ೨೪ ಗಂಟೆಯೂ ತೆರೆದಿಡಬೇಕು. ರಾತ್ರಿ ವೇಳೆ ಪ್ರಯಾಣಿಕರ ಸುರಕ್ಷತೆಗಾಗಿ ಕಾವಲುಗಾರರು ಅಥವಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಇದರೊಂದಿಗೆ ಬಸ್ ನಿಲ್ದಾಣದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.