ದಲ್ಲೆವಾಲರ ಪ್ರಾಣ ಉಳಿಸಲು ಮಧ್ಯಪ್ರವೇಶಕ್ಕೆ ಆಗ್ರಹ

| Published : Jan 14 2025, 01:04 AM IST

ದಲ್ಲೆವಾಲರ ಪ್ರಾಣ ಉಳಿಸಲು ಮಧ್ಯಪ್ರವೇಶಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದಲ್ಲೆವಾಲರ ಪ್ರಾಣ ಉಳಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚಿತ್ರದುರ್ಗದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು ತಕ್ಷಣ ಮಧ್ಯಪ್ರವೇಶ ಮಾಡುವಂತೆ ರಾಷ್ಟ್ರಪತಿಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.26 ರಿಂದ ಪಂಜಾಬ್-ಹರಿಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಷ ವಯಸ್ಸಿನ ಜಗಜಿತ್ ಸಿಂಗ್ ದಲ್ಲೇವಾಲ ರವರು ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು, ದೇಹ ನಿತ್ರಾಣಗೊಂಡು, ಮಾಂಸಖಂಡಗಳು ತಮ್ಮ ತೂಕವನ್ನು ಕಳೆದುಕೊಂಡಿದ್ದು ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ರೈತ ನಾಯಕರ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಕೇಂದ್ರಸರ್ಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಿತ್ತು. ಆದರೆ ಈ ಭರವಸೆಗೆ ವಿರುದ್ಧವಾಗಿ ನಡೆದುಕೊಂಡ ಕಾರಣಕ್ಕಾಗಿ 2ನೇ ಎನ್‌ಡಿಎ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಮತ್ತೇ ಆದೇ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ.

3ನೇ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ ದೇಶದ ಎಲ್ಲಾ ಸಂಸದರಿಗೆ ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ಈ ಸರ್ಕಾರಕ್ಕೆ ನೆನಪಿಸುವಂತೆ ಒತ್ತಾಯಿಸಲಾಗಿತ್ತು. ಅದಲ್ಲದೇ ರಾಷ್ಟ್ರಪತಿಗೂ ಜಿಲ್ಲಾಧಿಕಾರಿಗಳ ಮೂಲಕ ಐನೂರಕ್ಕೂ ಹೆಚ್ಚು ಜಿಲ್ಲೆಗಳಿಂದ ಈ ಲಿಖಿತ ಭರವಸೆಗಳನ್ನು ಸರ್ಕಾರಕ್ಕೆ ನೆನಪಿಸಿ ಈಡೇರಿಸಲು ಆಗ್ರಹಿಸಲಾಗಿತ್ತು.3 ವರ್ಷಗಳ ನಂತರವೂ ರೈತರ ಹಕ್ಕೋತ್ತಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಮಾತ್ರವಲ್ಲ. ಇಡೀ ವರ್ಷಕ್ಕಿಂತ ಹೆಚ್ಚು ಕಾಲ ಲಕ್ಷಾಂತರ ರೈತರು ಹೋರಾಟ ನಡೆಸಿ ರದ್ದುಪಡಿಸಿಕೊಂಡ ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣವನ್ನು ರದ್ದುಪಡಿಸುವ ಕರಾಳ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆಯನ್ನು ಜಾರಿ ಮಾಡುವ ಪ್ರಯತ್ನ ನಡೆಸುತ್ತದೆ. ದೇಶಾದ್ಯಂತ ಎಲ್ಲಾ ರೈತರ ಪಂಪಸೆಟ್ ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ರೈತರನ್ನು ಬಲವಂತಕ್ಕೆ ಒಳಪಡಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ಪೂರ್ಣಗೊಳಿಸಿದೆ. ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿಲ್ಲ. ಇಂತಹ ಹಲವು ರೈತ ವಿರೋಧಿ ಧೋರಣೆಗಳು ಹಾಗೂ ರೈತರ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ತಕ್ಷಣವೇ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಕುಮಾರ ಸಮತಳ, ಜಗಳೂರು ಯಾದವರೆಡ್ಡಿ, ಕೆ.ಸಿ.ಹೊರಕೇರಪ್ಪ, ಈಚಗಟ್ಟದ ಸಿದ್ದವೀರಪ್ಪ, ಹಂಪಯ್ಯನ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಟಿ.ತಿಪ್ಪೇಸ್ವಾಮಿ, ಡಿ.ಎಸ್.ಮಲ್ಲಿಕಾರ್ಜುನ, ಚೇತನ ಯಳನಾಡು ಭಾಗವಹಿಸಿದ್ದರು.