ಮೊಳಕಾಲ್ಮುರು ಕುಡಿವ ನೀರಿನ ಭ್ರಷ್ಟಾಚಾರ ತನಿಖೆಗೆ ಆಗ್ರಹ

| Published : May 06 2025, 12:22 AM IST

ಸಾರಾಂಶ

ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕುಡಿಯುವ ನೀರಿನ ಕಾಮಗಾರಿ ತನಿಖೆ ಸಮರ್ಪಕವಾಗಿ ನಡೆಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಕುಡಿಯುವ ನೀರಿನ ಕಾಮಗಾರಿಗಳಲ್ಲಿ ನಡೆದಿರುವ ಭಾರಿ ಪ್ರಮಾಣದ ಭ್ರಷ್ಟಾಚಾರ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಶೋಷಿತರ ವಾದ)ಯಿಂದ ಅಪರ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕುಡಿಯುವ ನೀರಿನಲ್ಲಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್‌ಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ನ್ಯಾಯೋಚಿತವಾಗಿ ತನಿಖೆಯಾಗಿಲ್ಲದ ಕಾರಣ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿ ಹಾಗೂ ಹಾಲಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಲೀಲಾವತಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್ ಒತ್ತಾಯಿಸಿದರು.

ಕುಡಿವ ನೀರಿನ 1 ಮತ್ತು 6ರ ಕಾಮಗಾರಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ. ಕಾಮಗಾರಿ ಕ್ರ.ಸಂ. 3ರಲ್ಲಿ ಗುತ್ತಿಗೆದಾರರು ಬೇರೆ ಇದ್ದರೂ ಬೇರೊಬ್ಬರ ಜೊತೆ ಕರಾರು ಮಾಡಿಕೊಳ್ಳಲಾಗಿದೆ. ಕಾಮಗಾರಿ ಕ್ರಸಂ 4ರಲ್ಲಿ ಗುತ್ತಿಗೆದಾರ ಅಶೋಕ್‌ಕುಮಾರ್ ಕೆ.ಎಸ್ ಅವರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ ಗುತ್ತಿಗೆದಾರರಿಂದ ಟೆಂಡರ್ ಪ್ರೀಮಿಯಂ ವ್ಯತ್ಯಾಸದ ಮೊತ್ತ 37,489 ರು. ಮತ್ತು ಭದ್ರತಾ ಠೇವಣಿ 2 ಲಕ್ಷದ 42 ರು.ಪಡೆಯದೆ ಕಾಮಗಾರಿ ನಿರ್ವಹಿಸಲಾಗಿದೆ. 1.30 ಕೋಟಿ ರು. ಕಾಮಗಾರಿಗಳ ತನಿಖೆ ಸಮರ್ಪಕವಾಗಿಲ್ಲ. ಯಾವುದೇ ತಂಡ ರಚಿಸದೆ ಒಬ್ಬರೇ ಸ್ವಯಂ ತನಿಖೆ ನಡೆಸಿ ಬೇಕಾದವರನ್ನು ರಕ್ಷಿಸಿ ಅಮಾಯಕರ ಮೇಲೆ 1ನೇ ಕಾಮಗಾರಿ ಹಾಗೂ 6 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ನೌಕರರ ಮೇಲೆ ಇಲಾಖೆ ಅನುಮತಿ ಪಡೆಯದೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. ದಲಿತ ಮುಖಂಡರಾದ ತಿಮ್ಮೇಶ್, ಚನ್ನಿಗರಾಮಯ್ಯ, ಶಶಿಕುಮಾರ್, ಹೊನ್ನೂರಪ್ಪ ಇದ್ದರು.