ಕರ್ನಾಟಕ ರಾಜ್ಯ ಗೆಳೆಯರ ಬಳಗದ ವತಿಯಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿಕಾರಿಪುರ ತಾಲೂಕಿನ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಭೂಮಿ ಭೂಗಳ್ಳರ ಪಾಲಾಗಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಶಿಕಾರಿಪುರ ತಾಲೂಕಿನಲ್ಲಿ ಒಟ್ಟು 39 ಮುಜರಾಯಿ ಇಲಾಖೆಯ ದೇವಸ್ಥಾನಗಳಿವೆ. ಅದರಲ್ಲಿ ಪ್ರವರ್ಗ ‘ಎ’ ಯಲ್ಲಿ 38, ಪ್ರವರ್ಗ ‘ಸಿ’ ಯಲ್ಲಿ ಸೇರಿದ ದೇವಸ್ಥಾನಗಳ ಪೈಕಿ 14 ದೇವಸ್ಥಾನಗಳು ಒಟ್ಟು 102 ಎಕರೆಗೂ ಅಧಿಕ ಭೂಮಿಯನ್ನು ಹೊಂದಿದ್ದು, ಅನೇಕ ವರ್ಷಗಳಿಂದ ಭೂಗಳ್ಳರು ಈ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ಶಿಕಾರಿಪುರದ ಪ್ರಮುಖ ದೇವಸ್ಥಾನವಾದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 20 ಎಕರೆಗೂ ಅಧಿಕ ಭೂಮಿ, ಖಾಲಿ ನಿವೇಶನ ಹಾಗೂ ಮನೆಗಳು ಇಂದು ಒತ್ತುವರಿದಾರರ ಪಾಲಾಗಿವೆ. ತಾಲೂಕು ಆಡಳಿತ ಇದನ್ನು ನೋಡಿದರೂ ಸಹಿತ ಕಣ್ಣು ಮುಚ್ಚಿಕೊಂಡಿದೆ. ತಹಸೀಲ್ದಾರರು ಇದಕ್ಕೆ ಸ್ಪಷ್ಟನೆ ನೀಡಬೇಕು.ಸರ್ಕಾರಿ ಭೂಮಿಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕೆಲಸ. ಮುಜರಾಯಿ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಗಳನ್ನು ಅಳತೆ ಮಾಡಿ ಒತ್ತುವರಿ ಮಾಡಿಕೊಂಡ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಎಂ.ಆರ್.ಅನಿಲ್‍ಕುಂಚಿ, ಜಿಲ್ಲಾಧ್ಯಕ್ಷ ಡಿ.ಪರಮೇಶ್ವರಪ್ಪ ಹಾಗೂ ಪ್ರಮುಖರಾದ ಜಯಂತಿ, ವಿಜಯ್‍ಕುಮಾರ್, ರೂಪ, ಯುವರಾಜ್ ಬಿ.ಎಸ್. ರುದ್ರೋಜಿರಾವ್, ಪ್ರದೀಪ್, ರವಿ, ಆದರ್ಶ, ಆಯುಷಾ, ಹಸ್ಸಂ, ಶಾದಿಕ್‍ಅಹಮ್ಮದ್, ಇಮ್ತಿಯಾಜ್, ರಾಜ್‍ಕುಮಾರ್, ಅಸ್ಕರ್ ಪಾಷಾ ಸೇರಿದಂತೆ ಹಲವರಿದ್ದರು.