ಕನ್ನಡಪ್ರಭ ವಾರ್ತೆ ದಾವಣಗೆರೆ

ಕಲಘಟಗಿ ಶಾಸಕ ಸಂತೋಷ್ ಲಾಡ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಸಂಪುಟದಲ್ಲಿ ಸಚಿವರಾಗಿ ಮಾಡಿ, ಪ್ರಮುಖ ಖಾತೆ ನೀಡುವ ಜೊತೆಗೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ನೀಡುವಂತೆ ದಾವಣಗೆರೆಯ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಡಿ.ಮಾಲತೇಶ ರಾವ್ ಜಾಧವ್, ಮಾಜಿ ಸಚಿವ ಸಂತೋಷ್ ಲಾಡ್‌ ಅವರಿಗೆ ನೂತನ ಸಿಎಂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಅಥವಾ ಸಂಪುಟ ದರ್ಜೆ ಸಚಿವರಾಗಿ ಮಾಡಿ, ಪ್ರಮುಖ ಖಾತೆಯನ್ನು, ಹಾನಗಲ್ ಶಾಸಕ ಶ್ರೀನಿವಾಸ ಮಾನೆಗೆ ಸಂಪುಟ ದರ್ಜೆ ಸಚಿವರಾಗಿ ಮಾಡಬೇಕು ಎಂದರು.

ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯ ನಮ್ಮದು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಲಾಡ್‌ ಅನೇಕ ಮಾನವೀಯ ಕಾರ್ಯ, ಕಾರ್ಮಿಕರ ಪರ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಲಾಡ್ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಪೆಹಲ್ಗಾಂ ದಾಳಿ ಮತ್ತು ಉತ್ತರಾಖಂಡದ ಪ್ರಾಕೃತಿಕ ವಿಕೋಪ ವೇಳೆ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲು ವಹಿಸಿದ್ದ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಸಂತೋಷ ಲಾಡ್‌ಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಾರ್ಮಿಕರ ಪರವಾಗಿ ಸಂತೋಷ ಲಾಡ್ ಸಾಕಷ್ಟು ಉತ್ತಮ ಕೆಲಸ ಮಾಡಿ, ಕಾರ್ಮಿಕರ ಮನ ಗೆದ್ದಿದ್ದಾರೆ. ಕಾರ್ಮಿಕರಿಗಾಗಿ ಅನೇಕ ಉತ್ತಮ ಕೆಲಸ ಮಾಡಿದ್ದಾರೆ. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆದರೂ, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಹಿಂದುಳಿದ ವರ್ಗವಾದ ಕ್ಷತ್ರಿಯ ಮರಾಠ ಸಮಾಜಕ್ಕೆ ಪ್ರಾತಿನಿಧ್ಯವನ್ನೇ ನೀಡಿಲ್ಲ. ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಬೇರೆ ಸಮುದಾಯಕ್ಕೆ 3 ಸಚಿವ ಸ್ಥಾನ ನೀಡಿದ್ದಾರೆ. ಮರಾಠ ಸಮುದಾಯದಿಂದ ಸಂತೋಷ್ ಲಾಡ್‌, ಶ್ರೀನಿವಾಸ ಮಾನೆ ಮಾತ್ರ ಗೆದ್ದಿದ್ದಾರೆ ಎಂದು ಅವರು ಹೇಳಿದರು.


ಡಿ.ಕೆ.ಶಿವಕುಮಾರರ ನೂತನ ಸಂಪುಟದಲ್ಲಿ ಮರಾಠ ಸಮುದಾಯಕ್ಕೆ ಪ್ರಾತಿನಿಧ್ಯವನ್ನೇ ನೀಡಿಲ್ಲ. ಒಂದೇ ಒಂದು ಸಚಿವ ಸ್ಥಾನ ಕೊಟ್ಟಿಲ್ಲ. ಸಂತೋಷ್ ಲಾಡ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಸಂಪುಟದಲ್ಲಿ ಸ್ಥಾನದ ಜೊತೆಗೆ ಪ್ರಮುಖ ಖಾತೆ ನೀಡಬೇಕು. ಶ್ರೀನಿವಾಸ ಮಾನೆಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮರಾಠ ಸಮುದಾಯ ದಿಂದ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದಾವಣಗೆರೆ ಜಿಲ್ಲೆಗೂ ನೂತನ ಸಿಎಂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿಲ್ಲ. ಉತ್ತರ ಶಾಸಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಡಿಕೆಶಿ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವ ಮೂಲಕ ಮಧ್ಯ ಕರ್ನಾಟಕಕ್ಕೆ ಕಾಂಗ್ರೆಸ್ ಹೈಕಮಾಂಡ್, ಸಿಎಂ ಡಿ.ಕೆ.ಶಿವಕುಮಾರ ಹಾಗೂ ರಾಜ್ಯ ನಾಯಕರು ಸ್ಪಂದಿಸಬೇಕು. ಒಂದು ವೇಳೆ ಹೊಸದಾಗಿ ಶಾಸಕರಾಗಿ ಆಯ್ಕೆಯಾದವರಿಗೂ ಸಚಿವ ಸ್ಥಾನ ನೀಡಿದರೆ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರುಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಸತ್ಯನಾರಾಯಣ, ಕೃಷ್ಣೋಜಿರಾವ್ ಮಾನೆ, ಪ್ರಭಾಕರ, ಅರುಣಕುಮಾರ ಮಾನೆ, ಕೃಷ್ಣೋಜಿರಾವ್ ಸಾಳಂಕಿ, ಸುರೇಶ ಜಾಧವ್, ತಿಪ್ಪೇಶ ರಾವ್ ಚೌಹಾಣ್, ಯಲ್ಲಪ್ಪ ಪವಾರ್, ಬಸವರಾಜ ಮಾನೆ, ಶಿವಾಜಿ ರಾವ್ ಪಿಸಾಳೆ, ಶ್ರೀನಿವಾಸ ಪಿಸಾಳೆ, ಯಲ್ಲಪ್ಪ ಪವಾರ್‌, ಶ್ರೀನಿವಾಸ ಕಾಟೆ, ಪ್ರಭಾಕರ ಸಾಳಂಕಿ ಇತರರು ಇದ್ದರು.

- - -

ಚನ್ನಗಿರಿ ತಾ. ಹೊದಿಗೆರೆ ಗ್ರಾಮದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೇ ಬೋಸಲೆ ಮಹಾರಾಜರ ಸಮಾಧಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಮಾಧಿ ಸ್ಥಳವು ಪ್ರಾಚ್ಯವಸ್ತು ಇಲಾಖೆಗೆ ಅಧೀನದಲ್ಲಿರುವ ಕಾರಣಕ್ಕೆ ಅಲ್ಲಿ ನಮ್ಮ ಸಮಾಜದಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುಮತಿ ಇಲ್ಲ. ಹಾಗಾಗಿ, ಸಮಾಧಿಗೆ ಹೊಂದಿಕೊಂಡಿರುವ 1 ಎಕರೆ ಜಾಗ ಖರೀದಿಸಲಾಗಿದೆ. ಆ ಜಾಗದಲ್ಲಿ ಸಮುದಾಯ ಭವನದ ನಿರ್ಮಾಣ ಕಾರ್ಯ ಶೇ.75ರಷ್ಟು ಮುಗಿದಿದೆ. ಆದಷ್ಟು ಬೇಗ ಉದ್ಘಾಟನೆ ನೆರವೇರಿಸಲಾಗುವುದು.

- ಡಿ.ಮಾಲತೇಶ ರಾವ್ ಜಾಧವ್‌, ಅಧ್ಯಕ್ಷ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ.